SUDDIKSHANA KANNADA NEWS/ DAVANAGERE/ DATE: 09-09-2023
ಹುಬ್ಬಳ್ಳಿ: ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲಾ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ:
Ganesh Chaturthi: ಗಣೇಶ ಚತುರ್ಥಿ ಹಬ್ಬಕ್ಕೆ ಮೂರ್ತಿ ಪ್ರತಿಷ್ಠಾಪಿಸುವ ಆಯೋಜಕರಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೊಟ್ಟಿರುವ ಸೂಚನೆಗಳೇನು…? ಎಚ್ಚರಿಕೆಗಳೇನು…?
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ಕ್ಲಿಯರೆನ್ಸ್ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ವಿದ್ಯುತ್ ಸರಬರಾಜಿಗೆ ಕ್ರಮ:
ರೈತರು ವಿದ್ಯುತ್ ಸರಬರಾಜಿನ ವ್ಯತ್ಯಯಕ್ಕಾಗಿ ಹೋರಾಟ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಆಗಸ್ಟ್ ತಿಂಗಳಲ್ಲಿ ಸರಿಯಾಗಿ ಮಳೆಯಾಗಿಲ್ಲ, ಬೇಸಿಗೆಯಲ್ಲಿ ಪಂಪಸೆಟ್ ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಇದರಿಂದ ವಿದ್ಯುತ್ ನ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿದೆ. ರೈತರ ತೊಂದರೆಯನ್ನು ನೀಗಿಸಲು, ವಿದ್ಯುತ್ ನ್ನು ಹೊರಗಿನಿಂದ ಖರೀದಿಸಿ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಜಿ20 ಸಭೆಗೆ ವಿಪಕ್ಷ ನಾಯಕರ ಆಹ್ವಾನಿಸದಿರುವುದು ತಪ್ಪು: ಸಿದ್ದರಾಮಯ್ಯ (Siddaramaiah)
ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಗೆ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ಬಗ್ಗೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರು ಅಧಿಕೃತವಾಗಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿದ್ದು, ಅವರನ್ನು ಜಿ20 ಸಭೆ ಆಹ್ವಾನಿಸದಿರುವುದು ತಪ್ಪು ಎಂದು ತಿಳಿಸಿದರು.
ಪರಿಹಾರ ಮಾರ್ಗಸೂಚಿ ಪರಿಷ್ಕರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ:
ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಇದುವರೆಗೆ ಯಾವುದೇ ಉತ್ತರ ಬಂದಿರುವುದಿಲ್ಲ. ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದಲೂ ಸಕಾಲದಲ್ಲಿ ನೆರವು ಬರಬೇಕಿದೆ ಎಂದರು.
ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ:
ಜೆಡಿಎಸ್ , ಬಿಜೆಪಿಯ ಬಿ ಟೀಂ ಎಂಬುದು ಸತ್ಯವಾಗುತ್ತಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ನಾನು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳಿದಾಗ ಅವರು ನನ್ನ ಮೇಲೆ ಸಿಟ್ಟಾಗಿದ್ದರು. ಜನತಾ ದಳ ಜಾತ್ಯಾತೀತ ಎಂದು ಹೆಸರಿಟ್ಟುಕೊಂಡಿರುವ ಪಕ್ಷ ಕೋಮುವಾದಿಗಳ ಜೊತೆ ಒಂದಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಯಾವ ಕಾರಣಕ್ಕೂ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಸೇರಿಕೊಳ್ಳುತ್ತಿರುವುದಾಗಿ ಶಾಸಕ ಜಿ.ಟಿ.ದೇವೇಗೌಡರು ಹೇಳಿರುವುದು, ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ ಎಂದು ತೋರಿಸುತ್ತದೆ. ಅಧಿಕಾರಕ್ಕಾಗಿ ಯಾವುದೇ ಕ್ರಮಕ್ಕೆ ಸಿದ್ಧ ಎಂಬುದನ್ನು ಅವರು ತೋರಿಸಿದ್ದಾರೆ ಎಂದು ಸಿದ್ದರಾಮಯ್ಯ (Siddaramaiah) ತಿಳಿಸಿದರು.
ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳಾಗಬೇಕೆಂದು ಪಕ್ಷದ ಅಭಿಮಾನಿಗಳು ಆಶಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪ್ರಧಾನಿಗಳಾಗಬಹುದು. ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ . ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಿಂದ ನೇರವಾಗಿ ಪ್ರಧಾನಮಂತ್ರಿಗಳಾದರು. ನನಗೆ ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ಆಸಕ್ತಿಯಿಲ್ಲ ಎಂದು ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಕಳಪೆ ಸಮವಸ್ತ್ರ ನೀಡಿದ ವಿರುದ್ಧ ಕ್ರಮಕ್ಕೆ ತೀರ್ಮಾನ:
ಚುನಾವಣೇ ಸಂದರ್ಭದಲ್ಲಿ ಹಿಜಾಬ್, ಹಲಾಲ್ ಪ್ರಕರಣಗಳು, ಹಿಂದುತ್ವ, ಸನಾತನ ಧರ್ಮದ ಕುರಿತು ಚರ್ಚೆ ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಜಾಬ್ ಹಲಾಲ್ ಪ್ರಕರಣಗಳು ನ್ಯಾಯಾಲಯದಲ್ಲಿದೆ., ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.