ಬೆಂಗಳೂರು: ಗುತ್ತಿಗೆಯಲ್ಲಿ ಮೀಸಲಾತಿ ಧರ್ಮದ ಆಧಾರದ ಮೇಲೆ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಸರ್ಕಾರದ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಸಾಕ್ಷರತಾ ಪ್ರಮಾಣ ಎಷ್ಟಿದೆ ಎಂದು ಪ್ರಶ್ನಿಸಿ ಮೀಸಲಾತಿ ನೀಡಿರುವುದು ಧರ್ಮದ ಆಧಾರದ ಮೇಲೆ ಅಲ್ಲ . 2 ಎ, ಎಸ್ಸಿ, ಎಸ್ಟಿ, ಪ್ರವರ್ಗ 1 ಕೊಟ್ಟಿಲ್ಲವೇ? ಕೇವಲ ಮುಸ್ಲಿಂರದ್ದು ಮಾತ್ರ ಯಾಕೆ ಹೇಳುತ್ತೀರಿ ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಪ್ರತಿಪಕ್ಷಗಳಿಗೆ ಅಲ್ಪಸಂಖ್ಯಾತರನ್ನು ಆಕ್ಷೇಪಿಸುವುದೇ ಕೆಲಸ ಎಂದರು.
ರಾಜ್ಯದ ನೀರಾವರಿ ಯೋಜನೆಗೆ ಕೇಂದ್ರದ ಅಸಹಕಾರ:
ನೀರಾವರಿ ಯೋಜನೆಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಇನ್ನೂ ಹೊರಡಿಸಿಲ್ಲ. ಭದ್ರಾ ಮೇಲ್ದಂಡೆಗೆ 5300 ಕೋಟಿಗಳನ್ನು ಬಜೆಟ್ ನಲ್ಲ ಘೋಷಿಸಿದ್ದರೂ ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. 15 ನೇ ಹಣಕಾಸು ಆಯೋಗದಲ್ಲಿ ವಿಶೇಷ ಅನುದಾನ ಕೊಡಲು ಶಿಫಾರಸ್ಸು ಮಾಡಿದ್ದರೂ, ಕೇಂದ್ರ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಬಗ್ಗೆ ಕಳಕಳಿ ಇದ್ದಿದ್ದಲ್ಲಿ ರಾಜ್ಯದ ಶಾಸಕರು, ಸಂಸದರು ಈ ಬಗ್ಗೆ ಪ್ರಶ್ನೆ ಕೇಳಬೇಕಿತ್ತು. ಸರ್ಕಾರ ದೆಹಲಿಯಲ್ಲಿ ಈ ಬಗ್ಗೆ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ಮನ್ಹಮೋಹನ್ ಸಿಂಗ್ ರ ಕೊಡುಗೆ ದೇಶಕ್ಕಿಲ್ಲವೇ?:
ಸೆಂಟ್ರಲ್ ಸಿಟಿ ಯೂನಿವರ್ಸಿಟಿಯನ್ನು ಮನ್ ಮೋಹನ್ ಸಿಂಗ್ ಸಿಟಿ ವಿವಿ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಅವರ ಕೊಡುಗೆ ಈ ದೇಶಕ್ಕೆ ಇಲ್ಲವೇ? ಎಂದು ಪ್ರಶ್ನಿಸಿದರು.
ಶೇ.47.3 ರಷ್ಟು ಆರ್ಥಿಕ ಬೆಳವಣಿಗೆ:
ಆಯವ್ಯಯದಲ್ಲಿ ದೊಡ್ಡ ಯೋಜನೆಗಳಿಗೆ ಕೈ ಹಾಕಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಯಿಸಿದ ಸಿಎಂ, ನೀರಾವರಿಗೆ ಕಳೆದ ವರ್ಷಕ್ಕಿಂತ 2 ಸಾವಿರ ಕೋಟಿ ಹೆಚ್ಚಿನ ಅನುದಾನ, ಬೆಂಗಳೂರು ನಗರಕ್ಕೆ 7ಸಾವಿರ ಕೋಟಿ , ಹೊರವರ್ತುಲ ರಸ್ತೆ , ಸುರಂಗ ಮಾರ್ಗ ಕಾರಿಡಾರ್ ಸೇರಿದಂತೆ ಬೆಂಗಳೂರು ನಗರ ಅಭಿವೃದ್ಧಿಗೆ 54000 ಕೋಟಿ ನೀಡಲಾಗಿದೆ. ಬಂಡವಾಳ ವೆಚ್ಚ 83200 ಕೋಟಿ ಹೆಚ್ಚಳವಾಗಿದ್ದು,ಅಂದರೆ ಶೇ.47.3 ರಷ್ಟು ಆರ್ಥಿಕ ಬೆಳವಣಿಗೆಯಾಗಿದೆ ಎಂದರು.
ಗೌರವಧನ ಹೆಚ್ಚಳ:
ಗ್ಯಾರಂಟಿಗಳಿಂದ ಸಿಎಂ ಕೈ ಕಟ್ಟಿಹಾಕಿದಂತಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ನೌಕರರ ಏಳನೇ ವೇತನ ಆಯೋಗಕ್ಕೆ 19000 ಕೋಟಿ ನೀಡಲಾಗಿತ್ತು. ಹಾಗಿದ್ದಿದ್ದರೆ, ಆಶಾ ಕಾರ್ಯಕರ್ತರು, ಅರ್ಚಕರು, ಪೈಲ್ವಾನರಿಗೆ ಅತಿಥಿ ಶಿಕ್ಷಕರು ಗೌರವಧನ ಹೆಚ್ಚಳ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.
ಬಿಜೆಪಿ ಜೆಡಿಎಸ್ ಶಾಸಕರ ಅನುದಾನದ ಬೇಡಿಕೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ 8000 ಕೋಟಿ ವಿಶೇಷ ಅನುದಾನ ಮೀಸಲಿರಿಸಿದ್ದು, ಅನುದಾನವನ್ನು ಪರಿಶೀಲಿಸಿ ಹೆಚ್ಚಿಸಲಾಗುವುದು ಎಂದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದವರು ಶೇ. 56 ರಷ್ಟು ಸಾಲ ಮಾಡಿದ್ದು, ಈ ಬಗ್ಗೆ ಪ್ರಧಾನಿ ಮೋದಿಯವರನ್ನು ಕೇಳಲಿ, ಯಾವ ನೈತಿಕತೆಯಿಂದ ಇಂಥ ಪ್ರಶ್ನೆ ಕೇಳುತ್ತಾರೆ ಎಂದರು.