ಬೆಂಗಳೂರು: “ರಾಮಲಿಂಗಾ ರೆಡ್ಡಿ ಅವರನ್ನು ದೇವರ ಬಳಿ ಕರೆದೊಯ್ದು ಈ ಸರ್ಕಾರ ಇನ್ನು ಹತ್ತು ವರ್ಷ ಅಧಿಕಾರದಲ್ಲಿ ಇರಬೇಕು ಎಂದು ಪ್ರಾರ್ಥನೆ ಮಾಡಿ, ಸಂಕಲ್ಪ ಮಾಡಿದ್ದು ನನಗೆ ಬಹಳ ಸಂತೋಷ ತಂದಿದೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಧರ್ಮವನ್ನು ಕೆಲವು ಪಕ್ಷದವರು ಗುತ್ತಿಗೆಗೆ ಪಡೆದಿದ್ದಾರೆ. ಆದರೆ ಅವರು ಮಾಡೋದು, ಖಾಲಿ ಬುಟ್ಟಿ, ಬೇವಿನ ಸೊಪ್ಪು ನಂದೆ ಬೆಳಗೋ ಪೂಜಾರಿ ಎಂಬಂತೆ ಖಾಲಿ ಟ್ರಂಕು. ಶಾಲು ಹಾಕಿಕೊಂಡು ದೇವರು, ಧರ್ಮ ಎಲ್ಲವೂ ನಮ್ಮದೇ ಎನ್ನುತ್ತಾರೆ. ನಾನು, ರಾಮಲಿಂಗಾ ರೆಡ್ಡಿ ಹಿಂದೂಗಳಲ್ಲವೇ? ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂ ಅಲ್ಲವೇ?” ಎಂದು ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಅಭಿನಂದನಾ ಸಮಾರಂಭವನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.
“ಬೇರೆ ಸರ್ಕಾರಗಳ ಅವಧಿಯಲ್ಲಿ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ನಾವು ನಮ್ಮ ಕೆಲಸಕ್ಕೆ ಕೂಲಿ ಕೇಳುತ್ತೇವೆ. ಅವರು ಕೇವಲ ಶಾಲು ಹಾಕಿಕೊಂಡು ರಾಮ ರಾಮ ಎಂದಾಕ್ಷಣ ಅವರು ಧರ್ಮ ರಕ್ಷಕರೇ? ರಾಮ ಮಂದಿರಕ್ಕೆ ನಾವು ನೀವೆಲ್ಲರೂ ಇಟ್ಟಿಗೆ ಕಾಸು ದೇಣಿಗೆ ನೀಡಿದೆವು. ಅದೆಲ್ಲವೂ ಏನಾದವು? ಈಗ ಮರ್ಯಾದೆ ಹೋಗಿಲ್ಲವೇ? ನಿಮಗೆ ಯಾವುದೇ ಕಾರಣಕ್ಕೂ ಅವಮಾನವಾಗಬಾರದು ಎಂದು ನಾವು ತೀರ್ಮಾನಿಸಿ ದೊಡ್ಡ ದೇವಾಲಯಗಳ ಹುಂಡಿ ಬಳಿ ಹಾಗೂ ಅದರ ಹಣ ತೆಗೆಯುವಾಗ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದೇವೆ. ನಿಮಗೆ ದೇವರ ದುಡ್ಡು ತಿನ್ನುವ ಆಸೆ ಇಲ್ಲ ಎಂದು ನನಗೆ ಗೊತ್ತಿದೆ. ಬಡವರು ಯಾರೂ ಇಂತಹ ಕೆಲಸ ಮಾಡುವುದಿಲ್ಲ” ಎಂದು ತಿಳಿಸಿದರು.
ಗ್ರಾಮೀಣ ದೇವಾಲಯಗಳ ಅರ್ಚಕರಿಗೆ ತರಬೇತಿಗೆ ಸರ್ಕಾರದ ಅಗತ್ಯ ಸಹಕಾರ
“ಅರ್ಚಕರ ಸಂಘದವರು ಹಾಗೂ ಮಠಗಳು ಕೂತು ಚರ್ಚೆ ಮಾಡಿ ಹಳ್ಳಿಗಳಲ್ಲಿ ಇರುವ 34 ಸಾವಿರ ದೇವಾಲಯಗಳಲ್ಲಿ ಪೂಜೆ ಮಾಡುವವರಿಗೆ ಸಂಸ್ಕಾರ ಕಲಿಸಿ. ನೀವು ಅವರಿಗೆ 3 ತಿಂಗಳು ತರಬೇತಿ ನೀಡಿ, ಅದಕ್ಕೆ ಬೇಕಾದ ಸಹಕಾರ ಸರ್ಕಾರ ನೀಡಲಿದೆ. ವಿದ್ಯೆ ಯಾರೊಬ್ಬರ ಮನೆ ಆಸ್ತಿಯೇ? ನೀವು ನಿಮ್ಮ ವಿದ್ಯೆ ದಾನ ಮಾಡಬಹುದಲ್ಲವೇ? ನಾನು ನನ್ನ ಕ್ಷೇತ್ರದಲ್ಲಿ 300 ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ ಮಾಡಿದ್ದೇವೆ. ಯಾರು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೋ ಅವರಿಗೆ ನೆಮ್ಮದಿ ಸಿಗುತ್ತದೆ. ಬಂಗಾರಪ್ಪ ಅವರ ಕಾಲದಲ್ಲಿ ಆರಾಧನ ಯೋಜನೆ ಮಾಡಿ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದರು” ಎಂದು ತಿಳಿಸಿದರು.





Leave a comment