SUDDIKSHANA KANNADA NEWS/ DAVANAGERE/ DATE:08-04-2025
ದಾವಣಗೆರೆ: ಡಿಸೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ. ಈ ಹಿಂದೆಯೂ ಹೇಳಿದ್ದೇನೆ. ಪದೇ ಪದೇ ಅದನ್ನೇ ಹೇಳುವುದಿಲ್ಲ. ಬದಲಾವಣೆ ಆಗದಿದ್ದರೆ ನನ್ನನ್ನು ಬಂದು ಕಾಣಿ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಮಾಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಡಿಮಠದ ಶ್ರೀಗಳು ಎಂ. ಬಿ. ಪಾಟೀಲ್ ಅವರು ಸಿಎಂ ಆಗುತ್ತಾರೆ ಎಂಬ ಭವಿಷ್ಯ ನುಡಿದಿರುವ ಕುರಿತಂತೆ ಈ ಪ್ರತಿಕ್ರಿಯೆ ನೀಡಿದರು.
ಎಂ. ಬಿ. ಪಾಟೀಲ್ ಮುಖ್ಯಮಂತ್ರಿಯಾಗುತ್ತಾರೋ ಆಗಲಿ. ಪದೇ ಪದೇ ಸಿಎಂ ಬದಲಾಗುತ್ತಾರೆ ಎಂಬ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಖಾಲಿ ಇದ್ದಾಗ ಮಾತನಾಡೋಣ. ಖಾಲಿಯಾದಾಗ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಹೆಸರು ಬಂದೇ ಬರುತ್ತದೆ. ಸತೀಶ್ ಜಾರಕಿಹೊಳಿ ಆಗಬಹುದು, ನಾನೂ ಆಗಬಹುದು. ಬಸವಂತಪ್ಪರೂ ಆಗಬಹುದು ಎಂದು ಶಿವಗಂಗಾ ಬಸವರಾಜ್ ಹೇಳಿದರು.