SUDDIKSHANA KANNADA NEWS/ DAVANAGERE/ DATE:09-08-2024
ಮೈಸೂರು/ ಬೆಂಗಳೂರು: ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ. ಇವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು
ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಈ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ರೋಷಾಗ್ನಿ ಹೊರಹಾಕಿದರು.
ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಿಜೆಪಿ , ಜೆಡಿಎಸ್ ನ ಜನತಂತ್ರ ವಿರೋಧಿ ಸರ್ವಾಧಿಕಾರಿ ದುರಾಡಳಿತವನ್ನು ವಿರೋಧಿಸಿ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ
ನಡೆದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದರು.
ಬಿಜೆಪಿ, ಜೆಡಿಎಸ್ ಎಷ್ಟೇ ಕಪಟ ಉದ್ಸೇಶದ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ. ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಹೆದರುವುದಿಲ್ಲ. ನಾನು ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಎಚ್ಚರಿಸಿದರು.
ನೀವೆಲ್ಲಾ ಪ್ರಜಾಪ್ರಭುತ್ವದ ಸೇನಾನಿಗಳು ಎಂದು ನೆರೆದಿದ್ದ ಲಕ್ಷಾಂತರ ಜನತೆಗೆ ತಿಳಿಸಿದ ಸಿಎಂ ಸಂವಿಧಾನ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತ ನಾಡಿನ ಏಳುಕೋಟಿ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕ್ವಿಟ್ ಇಂಡಿಯಾ ಚಳವಳಿ ಯಶಸ್ಸಿನ ಶುಭಾಶಯ ಕೋರಿದ ಸಿಎಂ ಅವರು ಮನುವಾದಿಗಳು ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.