Home ಕ್ರೈಂ ನ್ಯೂಸ್ “ಫೋಟೋ ತೆಗೆಸಿಕೊಂಡಾಕ್ಷಣ ಪರಿಚಯಸ್ಥರಲ್ಲ”, “ನನ್ನ ಹೆಸರು ದುರುಪಯೋಗ”: ಬಲಪಂಥೀಯ ಇನ್‌ಫ್ಲುಯೆನ್ಸರ್ ವಿರುದ್ಧ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ದೂರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಫೋಟೋ ತೆಗೆಸಿಕೊಂಡಾಕ್ಷಣ ಪರಿಚಯಸ್ಥರಲ್ಲ”, “ನನ್ನ ಹೆಸರು ದುರುಪಯೋಗ”: ಬಲಪಂಥೀಯ ಇನ್‌ಫ್ಲುಯೆನ್ಸರ್ ವಿರುದ್ಧ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ದೂರು!

Share
ಚಿರಾಗ್ ಪಾಸ್ವಾನ್
Share

ನವದೆಹಲಿ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಬಲಪಂಥೀಯ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ವಿರುದ್ಧ ದೆಹಲಿ ಪೊಲೀಸರಿಗೆ ಅಧಿಕೃತ ದೂರು ನೀಡಿದೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಹೋರಾಟಗಾರ್ತಿಯ ತಂದೆಯ ಮೇಲೆ ಹಲ್ಲೆ ನಡೆಸಿ, ನಂತರ ರಾಜಕೀಯ ನಾಯಕರ ಹೆಸರುಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಜುಲೈನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ (Cockroach Janta Party) ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ, ಸ್ವತಂತ್ರ ಭಾರದ್ವಾಜ್ ಎನ್ನುವ ವ್ಯಕ್ತಿ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತೆಯ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇತ್ತೀಚೆಗೆ ವೈರಲ್ ಆದ ಪಾಡ್‌ಕಾಸ್ಟ್ ವೀಡಿಯೊದಲ್ಲಿ, ಭಾರದ್ವಾಜ್ ತಾನು ಸಂತ್ರಸ್ತನ ತಲೆ ಒಡೆದು ಸುಮಾರು 60 ಹೊಲಿಗೆಗಳು ಬೀಳುವಂತೆ ಹೊಡೆದಿದ್ದಾಗಿ ಹಾಗೂ ತನ್ನ ರಾಜಕೀಯ ಪ್ರಭಾವದಿಂದಾಗಿ ಜೈಲಿಗೆ ಹೋಗದೆ ಪಾರಾಗಿದ್ದಾಗಿ ಬಹಿರಂಗವಾಗಿ ಕೊಚ್ಚಿಕೊಂಡಿದ್ದ. ಈ ಸಂಭಾಷಣೆಯಲ್ಲಿ ಆತ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಿ, “ಇವರೆಲ್ಲರೂ ನನ್ನ ಬೆಂಬಲಕ್ಕಿದ್ದಾರೆ” ಎಂದು ಹೇಳಿಕೊಂಡಿದ್ದ.

ಈ ಹೇಳಿಕೆಗೆ ಕಡಾಖಂಡಿತವಾಗಿ ಪ್ರತಿಕ್ರಿಯಿಸಿರುವ ಚಿರಾಗ್ ಪಾಸ್ವಾನ್, “ಸಾರ್ವಜನಿಕ ಜೀವನದಲ್ಲಿ ನಮ್ಮನ್ನು ಹಲವರು ಭೇಟಿಯಾಗುತ್ತಾರೆ ಮತ್ತು ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದರ ಆಧಾರದ ಮೇಲೆ ವೈಯಕ್ತಿಕ ಪರಿಚಯವಿದೆ ಎಂದು ಹೇಳಿಕೊಳ್ಳುವುದು ನಮ್ಮ ಹೆಸರಿನ ದುರುಪಯೋಗ” ಎಂದು ಸ್ಪಷ್ಟಪಡಿಸಿದ್ದಾರೆ. “ಕಾನೂನನ್ನು ಬಹಿರಂಗವಾಗಿ ಗೇಲಿ ಮಾಡುವ ಮತ್ತು ಹತ್ಯೆ ಯತ್ನದಂತಹ ಕೃತ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಅದು ದೇಶಕ್ಕೆ ತಪ್ಪು ಸಂದೇಶ ರವಾನಿಸುತ್ತದೆ. ಹೀಗಾಗಿ ನಾನು ಆತನ ವಿರುದ್ಧ ದೂರು ದಾಖಲಿಸಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದೇನೆ” ಎಂದು ಪಾಸ್ವಾನ್ ತಿಳಿಸಿದ್ದಾರೆ.

ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಾಗೂ ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾದ ಬೆನ್ನಲ್ಲೇ, ದೆಹಲಿ ಪೊಲೀಸರು ಸ್ವತಂತ್ರ ಭಾರದ್ವಾಜ್‌ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ವಿವಿಧ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles