ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ‘ಚಾಟ್‌ಜಿಪಿಟಿ’ (ChatGPT) ನೀಡಿದ ತಪ್ಪಾದ ವೈದ್ಯಕೀಯ ಸಲಹೆಯನ್ನು ನಂಬಿ, ಅಪಸ್ಮಾರ (Epilepsy/ಮೂರ್ಛೆ ರೋಗ) ರೋಗದ ಔಷಧ ಸೇವನೆಯನ್ನು ಹಂತ-ಹಂತವಾಗಿ ಸ್ಥಗಿತಗೊಳಿಸಿದ 31 ವರ್ಷದ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಬೋವೆನ್ ವಾನ್ ಎಂಬಾಕೆ ಅಮೆರಿಕದ ಸಿಯಾಟಲ್‌ನಲ್ಲಿ ಮೃತಪಟ್ಟಿದ್ದಾಳೆ.
ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಆಕೆಯ ಪೋಷಕರು ಚಾಟ್‌ಜಿಪಿಟಿ ಸಂಸ್ಥೆಯಾದ ಓಪನ್‌ಎಐ (OpenAI) ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಲೈಸೆನ್ಸ್ ಇಲ್ಲದೆ ವೈದ್ಯಕೀಯ ಚಿಕಿತ್ಸೆ ನೀಡಿದ ಆರೋಪ ಮಾಡಿದ್ದಾರೆ.
ಕಳೆದ ಒಂದು ದಶಕದಿಂದ ಗಿರ್ಕಿ ರೋಗದಿಂದ ಬಳಲುತ್ತಿದ್ದ ಬೋವೆನ್ ವಾನ್, ಅಮೆಜಾನ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು. ಆಕೆ ಸೇವಿಸುತ್ತಿದ್ದ ‘ಲಮೊಟ್ರಿಜಿನ್’ (Lamotrigine) ಔಷಧಿಯ ಪ್ರಭಾವದಿಂದ ಭಾಷಾ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಭಾವಿಸಿ, ಚಾಟ್‌ಜಿಪಿಟಿ ಸಹಾಯದಿಂದ ಆ ಔಷಧಿಯ ಡೋಸೇಜ್ ಅನ್ನು 400 ಮಿಗ್ರಾಂ ನಿಂದ ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲು ಯೋಜನೆ ರೂಪಿಸಿದ್ದರು.
ವೈದ್ಯರಿಗೆ ತಿಳಿಸದೆ ಡೋಸ್ ಕಡಿಮೆ ಮಾಡುವುದು ಸರಿಯಾದ ತಂತ್ರ ಎಂದು ಚಾಟ್‌ಜಿಪಿಟಿ ಆಕೆಗೆ ತಪ್ಪು ಮಾರ್ಗದರ್ಶನ ನೀಡಿತ್ತು. ಅಪಸ್ಮಾರದ ಲಕ್ಷಣಗಳು ಮರುಕಳಿಸಿದಾಗಲೂ “ನಿಮ್ಮ ಮೆದುಳು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದೆ” ಎಂದು ಚಾಟ್‌ಬಾಟ್ ಸಮಾಧಾನಪಡಿಸಿತ್ತು.
ದುರಂತ ಅಂತ್ಯ: ಫೆಬ್ರವರಿ 14 ರಂದು ಸಿಯಾಟಲ್‌ನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬೋವೆನ್ ವಾನ್ ಶವವಾಗಿ ಪತ್ತೆಯಾಗಿದ್ದು, ಔಷಧಿಯ ಹಠಾತ್ ಸ್ಥಗಿತವೇ ಸಾವಿಗೆ ಕಾರಣವೆಂದು ಶವಪರೀಕ್ಷೆ ವರದಿ ತಿಳಿಸಿದೆ.
158ಕ್ಕೂ ಹೆಚ್ಚು ಬಾರಿ ಎಚ್ಚರಿಕೆ ನಿರ್ಲಕ್ಷ್ಯ: ಚಾಟ್‌ಬಾಟ್ ಸಂಭಾಷಣೆಯಲ್ಲಿ ತಮಗೆ ಸ್ಮರಣಶಕ್ತಿ ಲೋಪ ಮತ್ತು ಗೊಂದಲ ಉಂಟಾಗುತ್ತಿದೆ ಎಂದು ವಾನ್ 158ಕ್ಕೂ ಹೆಚ್ಚು ಬಾರಿ ಕಳವಳ ವ್ಯಕ್ತಪಡಿಸಿದ್ದರೂ, ಚಾಟ್‌ಜಿಪಿಟಿ ವೈದ್ಯರನ್ನು ಸಂಪರ್ಕಿಸದಂತೆ ಸಲಹೆ ನೀಡಿತ್ತು.
ನ್ಯೂರೋಲಜಿಸ್ಟ್ ಆಕ್ರೋಶ: ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಔಷಧಿಯನ್ನು ಹಠಾತ್ ನಿಲ್ಲಿಸಲು ಯಾವುದೇ ವೈದ್ಯರು ಸಲಹೆ ನೀಡುವುದಿಲ್ಲ, ಇದು ಚಾಟ್‌ಬಾಟ್ ಮಾಡಿದ ದೊಡ್ಡ ಅಪರಾಧ ಎಂದು ಆಕೆಯ ವೈದ್ಯ ನಿಕೋಲಸ್ ಪೂಲೋಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಓಪನ್‌ಎಐ ಸ್ಪಷ್ಟನೆ: ಈ ಘಟನೆ ಜಿಪಿಟಿ-4ಒ (GPT-4o) ಹಳೆಯ ಮಾದರಿಯಲ್ಲಿ ನಡೆದಿದ್ದು, ಸದ್ಯ ಹೊಸ ಮಾದರಿಗಳು ಇಂತಹ ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಗುರುತಿಸುವಲ್ಲಿ ಹೆಚ್ಚು ದಕ್ಷವಾಗಿವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.





Leave a comment