SUDDIKSHANA KANNADA NEWS/DAVANAGERE/DATE:02_10_2025
ದಾವಣಗೆರೆ: ಆ ದೇವಿ ಕಷ್ಟ ಕಳೆದು ಇಷ್ಟ ಪೂರೈಸುವ ಶಕ್ತಿ ದೇವತೆ, ಚಂದವಾದ ಊರು, ರಮ್ಯ ರಮಣೀಯತೆಯ ನೋಟದಲ್ಲಿ ಬೃಹದಾಕಾರದ ಶಿಲೆಯು ದೇವಳದ ಸುತ್ತಲಿನ ಅಂದವನ್ನು ಹೆಚ್ಚಿಸುತ್ತಿದೆ. ದೇವಿಯ ಭಕ್ತನೋರ್ವ ಸ್ವಂತ ಖರ್ಚಿನಲ್ಲೇ ಅದ್ಭುತವಾಗಿ ದೇವಾಲಯ ನಿರ್ಮಾಣ ಮಾಡಿದ್ದು ಇಡೀ ದೇಶಾದ್ಯಂತ ಖ್ಯಾತಿ ಪಡೆತಾ ಇದೆ, ಜೊತೆಗೆ ದೇವಿ ಇಷ್ಟಾರ್ಥ ಸಿದ್ದಿಯಾಗಿದ್ದು ಹರಕೆ ಕಟ್ಟಿಕೊಂಡರೇ ಯಾವುದೇ ಡೌಟಿಲ್ಲದೇ ನಿಮ್ಮ ಕೆಲಸ ಆಗೋದು ಪಕ್ಕ.. ಆಗಿದ್ರೆ ಈ ಶಕ್ತಿ ದೇವತೆ ನೆಲೆಸಿರೋದಾದ್ರು ಎಲ್ಲಿ, ದೇವಿ ಪವಾಡದ ಕುರಿತ ಸ್ಪೆಷಲ್ ರಿಪೋರ್ಟ್.
READ ALSO THIS STORY: ‘ಐ ಲವ್ ಮುಹಮ್ಮದ್’ ಮಾಸ್ಟರ್ ಮೈಂಡ್, ಹಿಂದೂ ವಿರೋಧಿ ತೌಕೀರ್ ರಜಾ ಯಾರು?: ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
ಆಂಧ್ರಪ್ರದೇಶದ ತಿರುಮಲದ ತಿರುಪತಿಗೆ ದೇವಿ ಮೂರ್ತಿ ತೆಗೆದುಕೊಂಡಲು ನಿರ್ಧರಿಸಿದರೂ ಹೋಗದ ತಾಯಿ. ಬೇರೆಯವರು ಎಷ್ಟೇ ಪೂಜೆ, ಪುನಸ್ಕಾರ ನೆರವೇರಿಸಿದರೂ ಹೋಗಲೊಪ್ಪದ ದೇವಿ, ಲೋಕಿಕೆರೆ ಗ್ರಾಮದಲ್ಲಿ ನೆಲೆಸಿದ್ದೇ ಪವಾಡ. 1300 ವರ್ಷಗಳ ಅಗ್ರಹಾರ ಆಗಿದ್ದ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮ, ಚಂಡಿಕಾ ದುರ್ಗಾ ಪರಮೇಶ್ವರಿ ನಿಂತಿದ್ದೇ ಸೋಜಿಗ. ಯೆಸ್ ಸ್ನೇಹಿತರೇ, ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಈಗ ಮತ್ತೆ ರಾಜ್ಯದ ಗಮನ ಸೆಳಿತಾ ಇದೆ,
ಯಾಕಂದ್ರೆ ಸದ್ದು ಗದ್ದಲವಿಲ್ಲದೇ ಇಲ್ಲಿ ಧಾರ್ಮಿಕ ಸೇವೆ ನಡೀತಾ ಇದ್ದು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.. ಹೌದು.. ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ತ್ರಿಕೂಟಾಚಲ ದೇವಸ್ಥಾನವನ್ನ ಸ್ವಂತ ಖರ್ಚಿನಲ್ಲಿ, ಯಾವುದೇ ಪ್ರತಿಫಲಾಕ್ಷೆ, ಸ್ವಾರ್ಥ ಇಲ್ಲದೇ ಕತ್ತಲಗೆರೆ ತಿಪ್ಪಣ್ಣ ಎಂಬುವವರು ಅದ್ಬುತವಾಗಿ ದೇವಸ್ಥಾನ ನಿರ್ಮಾಣ ಮಾಡಿಸಿದ್ದಾರೆ, ಇನ್ನೂ ತಿಪ್ಪಣ್ಣನವರಿಗೆ ಅವರ ಧರ್ಮಪತ್ನಿ ಶ್ವೇತ, ಮಕ್ಕಳಾದ ಸುಜನ್, ಸದನ್ವ ಅವರು ಸೇರಿದಂತೆ ಅವರ ಇಡೀ ಕುಟುಂಬ ಧಾರ್ಮಿಕ ಸೇವೆಗಾಗಿ ಕಂಕಣಬದ್ದವಾಗಿ ನಿಂತು ಕೆಲಸ ಮಾಡ್ತಾ ಇದ್ದಾರೆ.
ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮ. 1300 ವರ್ಷಗಳ ಹಿಂದೆ ಆಗ್ರಹಾರವಾಗಿದ್ದ ತಾಣ. ಆದ್ರೆ, ಈಗ ಕರ್ನಾಟಕ ಮಾತ್ರವಲ್ಲ, ಬೇರೆ ಬೇರೆ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ತನ್ನ ಪವಾಡದಿಂದಲೇ ಗಮನ ಸೆಳೆದಿರುವ ಊರು. ಅಂದ ಹಾಗೆ ಈ ಗ್ರಾಮ ಇಷ್ಟೊಂದು ಪ್ರಸಿದ್ಧಿಯಾಗಲು ಕಾರಣ ಇಲ್ಲಿ ನೆಲೆನಿಂತಿರುವ ಶ್ರೀ ಕ್ಷೇತ್ರ ತ್ರಿಕೋಟಾಚಲ ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಸ್ಥಾನದಲ್ಲಿ ಶ್ರೀ ಅರ್ಧನಾರೇಶ್ವರಸ್ವಾಮಿ ಸನ್ನಿದಿ, ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಿ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸನ್ನಿದಿ ಇದ್ದು ಮೂರು ದೇವರುಗಳಿಂದ ಕೂಡಿದ ದೇವಾಲಯವೇ ಶ್ರೀ ಕ್ಷೇತ್ರ ತ್ರಿಕೂಟಾಚಲ ದೇವಸ್ಥಾನವಾಗಿದೆ.. ಈ ದೇಗುಲದಲ್ಲಿ ನಡೆಯುತ್ತಿರುವ ಪವಾಡ. ಹರಕೆ ಹೊತ್ತಿರುವವರ ಇಷ್ಟಾರ್ಥ ಸಿದ್ಧಿಯಾಗುವ ಕಾರಣಕ್ಕಾಗಿಯೇ ಎಂಬುದು ವಿಶೇಷವಾಗಿದೆ
ಐತಿಹಾಸಿಕ ನೆಲೆ ಲೋಕಿಕೆರೆ ಗ್ರಾಮ:
ಲೋಕಿಕೆರೆ ಗ್ರಾಮ ಐತಿಹಾಸಿಕ ಹಿನ್ನೆಲೆಯನ್ನೇ ಒಡಲಲ್ಲಿ ಇಟ್ಟುಕೊಂಡಿದೆ. ಐತಿಹಾಸಿಕ, ಇತಿಹಾಸ ಹೊಂದಿರುವ ಹತ್ತು ಹಲವು ಕುರುಹುಗಳೊಂದಿಗೆ ಗಮನ ಸೆಳೆಯುವ ಊರು. ಈಗಿನ ಪೀಳಿಗೆಗೆ ವಿಶೇಷವಾಗಿದ್ದು, ವಿಭಿನ್ನವಾಗಿ ಲೋಕಿಕೆರೆ ಬೆಳೆದಿದೆ.7ನೇ ಶತಮಾನದ ಬಾದಾಮಿ ಕಲ್ಯಾಣ ಚಾಲುಕ್ಯರ ವಿಕ್ರಮಾಧಿತ್ಯನ ಪಟ್ಟದ ರಾಣಿ ಲೋಕ ಮಹಾದೇವಿ ಏಳು ತೂಬಿನ ಕೆರೆ ಕಟ್ಟಿಸಿದ ಹಿನ್ನೆಲೆಯೂ ಇದೆ. ಸಮುದ್ರದಂತಹ ಕೆರೆ, ಲೋಕಮಹಾದೇವಿಕೆರೆ, ಲೋಕ ನಾಯಕ ಕೆರೆ, ಲೋಕವ್ವನ ಕೆರೆ, ಲೋಕಿಕೆರೆ ಅಂತಾನೂ ಫೇಮಸ್ಸಾಗಿದೆ.
ಇನ್ನು ಕತ್ತಲಗೆರೆ ಸೊಪ್ಪಿನ ತಿಪ್ಪಣ್ಣನವರ ಆರಾಧ್ಯ ದೈವ ವೆಂಕಟಶ್ವರ ಸ್ವಾಮಿ ಆಗಿದೆ, ಲೋಕಿಕೆರೆ ದಕ್ಷಿಣ ಭಾಗದಲ್ಲಿ ಶ್ರೀ ಕ್ಷೇತ್ರ ತ್ರಿಕೂಟಚಲ ಶೈಲಿಯಲ್ಲಿ ಸುಂದರ ಪರಿಸರ, ಹಸಿರು ತೋಟಗಳ ನಡುವೆ 2023ರಲ್ಲಿ ನಿರ್ಮಿಸಲ್ಪಟ್ಟಿದೆ. ಚಂಡಿಕಾ ದುರ್ಗಾಪರಮೇಶ್ವರಿ ಕಣ್ತುಂಬಿಕೊಳ್ಳುವುದು ಆನಂದ ಪರಮಾನಂದ. ಮನಸ್ಸಿಗೆ ನೆಮ್ಮದಿ, ಸಂತೋಷ. ಎಷ್ಟೇ ನೋವುಗಳಿದ್ದರೂ ಮಾಯವಾಗುವ ಶ್ರದ್ಧಾ ಭಕ್ತಿಯ ತಾಣವಾಗಿ ಮಾರ್ಪಟ್ಟಿದೆ..
ಲೋಕಿಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ತ್ರಿಕೂಟಾ ಚಲ ದೇವಸ್ಥಾನ ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದೆ. ನಂಬಿದವರ ಕೈ ಬಿಡುವುದಿಲ್ಲವೆಂದು ದೇವಿಯ ಅನುಗ್ರಹಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ದಸರಾ ಮಹೋತ್ಸವ ಹಿನ್ನಲೆ ಪ್ರತಿನಿತ್ಯ ವಿಭಿನ್ನ ಕಾರ್ಯಕ್ರಮಗಳು, ಪೂಜಾ ವಿಧಿವಿಧಾನಗಳು ನೆರವೇರುತ್ತವೆ. 2019ರಲ್ಲಿ ಬೆಂಗಳೂರಿನ ನೆಲಮಂಗಲದಲ್ಲಿ ಆಯತ ಮಹಾ ಚಂಡಿಕಾಯಾಗ ನಡೆಯಿತು. ದೇಶದಲ್ಲಿ 8ರಿಂದ 10 ಆಯತಾ ಮಹಾ ಚಂಡಿಕಾಯಾಗ ಆಗಿರಬಹುದು. ಅದರಲ್ಲಿ ಪರಿಪೂರ್ಣವಾಗಿರುವುದು ನಮ್ಮದು ಮಾತ್ರ ಎಂದೆನಿಸುತ್ತದೆ ಎನ್ನುತ್ತಾರೆ ತಿಪ್ಪಣ್ಣ.
ಆಯತ ಚಂಡಿಕಾಯಾಗ ಯಾಗಗಳಲ್ಲಿ ಅತ್ಯಂತ ಶ್ರೇಷ್ಠ ಮತ್ತು ಪವಿತ್ರ. ಕಾರ್ಕಳದ ಸದಾಶಿವ ಗುಡಿಗಾರ್ ಕೃಷ್ಣಶಿಲೆಯಲ್ಲಿ ರೂಪಿಸಿದ ಚಂಡಿಕಾ ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಬೆಂಗಳೂರಿನ ನೆಲಮಂಗಲದಲ್ಲಿ 50 ಎಕರೆ ಜಾಗದಲ್ಲಿ 2019ರಲ್ಲಿ ದೊಡ್ಡ ಮಟ್ಟಕ್ಕೆ ಅತ್ಯಂತ ವ್ಯವಸ್ಥಿತವಾಗಿ ಆಯತ ಮಹಾ ಚಂಡಿಕಾ ಯಾಗ ಮಾಡಲಾಗಿತ್ತು. ಯಾಗ ಮುಗಿದ ಬಳಿಕ ಮೂರ್ತಿ ಎಲ್ಲಿ ಇಡುವುದು ಎಂಬ ಗೊಂದಲ ಏರ್ಪಟ್ಟ ಕಾರಣ ಆಗ ಅಮ್ಮನವರ ಮೂರ್ತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಕಳುಹಿಸಲಾಗಿತ್ತು.
ಎರಡು ವರ್ಷ ಅಲ್ಲಿಯೇ ಇತ್ತು. ಬಳಿಕ ತಿರುಪತಿಯ ಭಕ್ತರೊಬ್ಬರು ಅಮ್ಮನವರ ಮೂರ್ತಿಯನ್ನು ಲಾರಿಯಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದರು. ಆದ್ರೆ ಅಮ್ಮನವರು ಹೋಗಲೇ ಇಲ್ಲ. ತಿಪ್ಪಣ್ಣನವರು ಹೇಳುವಂತೆ ಹೊಸಕೋಟೆಯಲ್ಲಿ ನಿಂತು ಪ್ರಶ್ನಾವಳಿ ಹಾಕಿದಾಗ ಸುಮಾರು ಜನರು ತೆಗೆದುಕೊಂಡು ಹೋಗಲು ಮುಂದೆ ಬಂದರೂ ದೇವಿ ಮಾತ್ರ ಸುತಾರಾಂ ಸಮ್ಮತಿಸಲಿಲ್ಲ. ಆಗ ಅಲ್ಲಿಯೇ ತಿಪ್ಪಣ್ಣರೂ ಇದ್ದರು. ನಮಗೆ ಆಗಿ ಬರುತ್ತದೆ ಎಂದಾಗ ಶ್ರೀ ಎಂದು ಬಂತು. ಆಗ ಬೆಂಗಳೂರಿನ ನಿವಾಸದಲ್ಲಿ ವರ್ಷಗಳ ಕಾಲ ಪೂಜೆ ನಡೆದು ಬಳಿಕ ಲೋಕಿಕೆರೆ ಗ್ರಾಮದಲ್ಲಿ ತಿಪ್ಪಣ್ಣನವರ ಹತ್ತು ಎಕರೆ ಜಮೀನಿನಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.
ಪ್ರಶ್ನಾವಳಿಯಲ್ಲಿ ಬಂದಿದ್ದೇ ಲೋಕಿಕೆರೆ ಗ್ರಾಮದ ಆಯ್ಕೆ. 1300 ವರ್ಷದ ಹಿಂದೆ ಲೋಕಿಕೆರೆ ಗ್ರಾಮದ ಈ ಜಾಗ ಅಗ್ರಹಾರ ಆಗಿತ್ತು ಎನ್ನಲಾಗಿದೆ, ಈಗಾಗಿ ತಾಯಿ ಮತ್ತೆ ವಾಪಾಸ್ ಸ್ವಂತ ಜಾಗಕ್ಕೆ ಬಂದು ನೆಲೆಸಿದ್ದಾಳೆ ಎನ್ನಲಾಗ್ತಿದೆ, ಮಗನ ಮನೆಗೆ ಬಂದ ಚಂಡಿಕಾ ದುರ್ಗಪರಮೇಶ್ವರಿ ಎಂದು ಎಲ್ಲರು ಕರೆಯುತ್ತಾರೆ. 2022 ಫೆಬ್ರುವರಿ 7 ರಂದು ಭೂಮಿ ಪೂಜೆ ನೆರವೇರಿತು. ಕಲ್ಲಿನಲ್ಲೆ ದೇವಸ್ಥಾನ ನಿರ್ಮಾಣ ಆಗಿರುವುದು ವಿಶೇಷವಾಗಿ 2023ರಲ್ಲಿ ದೇವಾಲಯ ಲೋಕಾರ್ಪಣೆ ಆಗಿದೆ. ದೇವಸ್ಥಾನ ಆವರದಲ್ಲೇ ಸುಬ್ರಮಣ್ಯ ದೇವಸ್ಥಾನವಿದ್ದು ಸುತ್ತಲು ಸುಂದರ ಪರಿಸರ ಇದೆ ಜೊತೆಗೆ ಗೋವುಗಳ ಸಾಕಾಣಿಕೆ ಮಾಡಲಾಗ್ತಿದೆ, ದೇವಿ ಸುಸೂತ್ರವಾಗಿ ನೆಲೆ ನಿಂತಿದ್ದು ಆಶ್ಚರ್ಯ ತಂದಿದೆ. ಅಂದುಕೊಂಡ ಕಾರ್ಯಗಳು ನಡೆಯುತ್ತಿವೆ.
ದೇವಸ್ಥಾನ ಲೋಕಾರ್ಪಣೆ ದಿನದ ವೇಳೆ 40ರಿಂದ 50 ಸಾವಿರ ಭಕ್ತರು ಬಂದಿದ್ದು ದೇವಿ ಅನುಗ್ರಹವೇ ಕಾರಣವಾಗಿದೆ. ನಮ್ಮ ಮನೆಯವರು ಶ್ರೀ ನಾರಾಯಣ ಎಂಟರ್ ಪ್ರೈಸೆಸ್ ಕಂಪೆನಿ ವ್ಯವಹಾರದಿಂದ ಗಳಿಸಿದ್ದಾರೆ, ಅದರಿಂದಲೇ ದೇವಿಗೆ ದೇವಸ್ಥಾನ ಕಟ್ಟಿಸಿದ್ದಾರೆ, ಜೊತೆಗಿರುವ ಸಹೋದ್ಯೋಗಿಗಳು, ಕೆಲಸಗಾರರು ಸಹಕಾರ ಕೊಟ್ಟಿದ್ದಾರೆ ಅಂತಾರೆ ಕುಟುಂಬದವರು.
ಭಕ್ತರು ಬರಲು ಕಾರಣವೇ ತಾಯಿಯ “ಹರಕೆ ಕಟ್ಟುವ” ಪದ್ದತಿ
ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಸಿದ್ಧಿಯಾಗಲು ಕಾರಣ ಹರಕೆ ಕಾಯಿ ಕಟ್ಟುವ ಪದ್ದತಿ. ಅಮ್ಮನ ಇಚ್ಚೆಯಿಂದ ಎಲ್ಲವೂ ನಡೆಯುತ್ತಿದೆ. ಉದ್ಯೋಗ, ಆರ್ಥಿಕ ಸಂಕಷ್ಟ, ಮದುವೆ, ಸಂತಾನ ಫಲ, ಜಮೀನು ವ್ಯಾಜ್ಯಗಳು, ಮಾನಸಿಕ, ಆರೋಗ್ಯ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳಿಗೆ ತಾಯಿ ಪರಿಹಾರ ನೀಡುತ್ತಾಳೆ ಎಂಬ ನಂಬಿಕೆ ಹೆಚ್ಚಾಗುತ್ತಲೇ ಭಕ್ತರ ದಂಡು ಸಮುದ್ರೋಪಾದಿಯಲ್ಲಿ ಹರಿದು ಬರುತ್ತಿದೆ. ಲೋಕಿಕೆರೆಯಲ್ಲಿ ದೇವಸ್ಥಾನ ಮಾಡಬೇಕೆಂದು ಯಾರ ಮನಸ್ಸಿನಲ್ಲಿಯೂ ಇರಲಿಲ್ಲ. ಬೇರೆ ಬೆಂಗಳೂರು, ತುಮಕೂರು ಹಾಗೂ ಬೇರೆ ರಾಜ್ಯದಲ್ಲಿ ಪ್ರತಿಷ್ಠಾಪನೆ ಆಗುವ ಯೋಚನೆ ಇತ್ತು. ದೇವಿಯ ಮಹಾತ್ಮೆ, ತಿಪ್ಪಣ್ಣರ ಆಲೋಚನೆ ಕುಟುಂಬ ವರ್ಗದವರು ದೇವಿಯ ಬಗ್ಗೆ ನಂಬಿಕೆ ಶ್ರದ್ಧಾ ಭಕ್ತಿಗೆ ಒಲಿದು ದೇವಿ ಇಲ್ಲಿ ಬಂದು ನೆಲೆಸಿದ್ದಾಳೆ. ಮಗನ ಮನೆಗೆ ಚಂಡಿಕಾ ತಾಯಿ ವಾಪಾಸ್ ಬಂದಿದ್ದಾಳೆ ಅಂತಾರೆ ಭಕ್ತರು.
ದೇವಸ್ಥಾನಕ್ಕೆ ಬಂದವರೆಲ್ಲಾ ಹೇಳ್ತಿದ್ದಾರೆ. ಕೆಲಸ ಸಿಕ್ತು, ಜಮೀನು ಸಮಸ್ಯೆ ಸರಿ ಹೋಯ್ತು. ಮದುವೆ ಆಯ್ತು, ಮಗು ಆಯ್ತು. ಆರೋಗ್ಯ ಕಾಪಾಡು ಎಂದು ಬಂದವರೂ ಹುಷಾರಾಗಿ ಹೋಗುತ್ತಿದ್ದಾರೆ. ಅಮ್ಮ ಎಲ್ಲವನ್ನೂ ನಡೆಸಿಕೊಡುತ್ತಿದ್ದಾಳೆ. ನಮಗೂ ಅಮ್ಮ ಒಲಿದಿದ್ದಾಳೆ. ನಮಗಂತೂ ಅಪಾರ ನಂಬಿಕೆ ಇದೆ. ಜನರಿಗೂ ಒಳ್ಳೆಯದಾಗುತ್ತದೆ. ನಮ್ಮಷ್ಟಕ್ಕೆ ನಾವೇ ಅಲ್ಲ. ಸಮಾಜಕ್ಕೆ ಒಳ್ಳೆಯದು ಆಗುತ್ತದೆ ಅಂತಾರೆ ಭಕ್ತರು.
ತಾಯಿ ಪ್ರತಿದಿನ ಸ್ಮರಣೆ ಮಾಡಿದರೆ ಬೆಳಕು ಹರಿಯುವುದಿಲ್ಲ. ರಾತ್ರಿ ಮಲಗುವಾಗ ಸ್ಮರಿಸಿಕೊಂಡೇ ಮಲಗುತ್ತೇವೆ. ಪವಾಡ ರೂಪಿಣಿ ಆಕೆ. ಅದ್ಭುತವಾಗಿ ಅಂದುಕೊಂಡದ್ದು ನೆರವೇರುತ್ತದೆ. ಅರ್ಧ ಚಂದ್ರಾಕಾರದಲ್ಲಿ ಪ್ರಸಾದ ಕೊಡುತ್ತಾಳೆ. ಇದೊಂದು ವಿಸ್ಮಯ. ಅಮ್ಮನ ದರ್ಶನ ಪಡೆಯುವುದೇ ನಮ್ಮ ಭಾಗ್ಯ. ಕೇಳಿದ್ದೆಲ್ಲಾ ಆಗುತ್ತೆ. ನಾವು ಇಲ್ಲಿಗೆ ಬಂದು ಹೋದ ಮೇಲೆ ಆರ್ಥಿಕವಾಗಿ, ಮಾನಸಿಕ ನೆಮ್ಮದಿ ಸಿಗುತ್ತದೆ. ಅಮ್ಮನಿಂದಲೇ ಎಲ್ಲವೂ ಈಡೇರುತ್ತಿವೆ. ತುಂಬಾ ಭಕ್ತರು ಬರುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಹೆಚ್ಚಿನ ಭಕ್ತರು ಇರುತ್ತಾರೆ. ತಿಪ್ಪಣ್ಣ ಸ್ವಾರ್ಥವಿಲ್ಲದೇ ಧರ್ಮ ಜ್ಯೋತಿ ಬೆಳಗುತ್ತಿದ್ದಾರೆ. ಧರ್ಮ ಕಾರ್ಯಕ್ಕೆ ವಿನಿಯೋಗ ಮಾಡುತ್ತಾ, ಧರ್ಮ ಉಳಿಸುತ್ತಿದ್ದು, ತಿಪ್ಪಣ್ಣ ಮತ್ತು ಶ್ವೇತಾ ಅವರ ಹೆಸರು ಅಮರವಾಗಲಿ. ಅಕ್ಕಿ ಕಾಯಿ ಕಟ್ಟಿದರೆ ಇಷ್ಟಾರ್ಥ ಸಿದ್ಧಿಸುವುದು ಖಚಿತ ಅಂತಾರೆ ಭಕ್ತರು.
ದಸರಾ ಹಿನ್ನಲೆ ಹನ್ನೊಂದು ದಿನಗಳ ಕಾಲ ವಿಶೇಷ ಅಲಂಕಾರಗಳು ನಡೆದು ಪೂಜೆಗಳು ಜರುಗುತ್ತಾ ಇವೆ, ಪ್ರತಿ ಸಂಜೆ ಕೋಲಾಟ, ಸಂಗೀತಾ ಕಾರ್ಯಕ್ರಮಗಳು, ನೃತ್ಯ ಸಂಭ್ರಮ, ಕೋಳಲು ವಾದನ, ವೀಣಾ ವಾದನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ, ಪ್ರತಿನಿತ್ಯ ದಾಸೋಹ ಏರ್ಪಡಿಸಲಾಗಿದೆ..
ದುರ್ಗಾ ಪರಮೇಶ್ವರಿ ತಾಯಿಗೆ ಪ್ರತಿ ಮಂಗಳವಾರ, ಶುಕ್ರವಾರ ವಿಶೇಷ ಅಲಂಕಾರ, ಪ್ರಸಾದ ವ್ಯವಸ್ಥೆಯೂ ಇದೆ. ಹರಕೆ ಕಾಯಿ, ಅಮ್ಮನವರ ಹೂ ಪ್ರಸಾದ ನಡೆಯುತ್ತದೆ, ಇಷ್ಟಾರ್ಥ ಸಿದ್ಧಿಸಬೇಕಾದರೆ, ಅಂದುಕೊಂಡದ್ದು ನೆರವೇರಬೇಕಾದರೆ ಪವಾಡ ಸೃಷ್ಟಿಸಿರುವ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ. ಇಷ್ಟಾರ್ಥ ಸಿದ್ಧಿಸಿಕೊಳ್ಳಿ.