SUDDIKSHANA KANNADA NEWS/ DAVANAGERE/ DATE:02-04-2025
ದಾವಣಗೆರೆ: ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ 14,048 ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ 12ನೇ ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.
ಒಟ್ಟು 46 ವಿದ್ಯಾರ್ಥಿಗಳಿಗೆ ರಾಜ್ಯಪಾಲರು 87 ಚಿನ್ನದ ಪದಕಗಳನ್ನು ಧಾರಣೆ ಮಾಡಿದರೆ, 57 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಸ್ವೀಕರಿಸಿದರು. ಈ ಬಾರಿ ಒಟ್ಟು 8837 ಮಹಿಳೆಯರು ಮತ್ತು 5211 ಪುರುಷ ವಿದ್ಯಾರ್ಥಿಗಳು ಪದವಿ ಪಡೆದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕನಕ ಗುರುಪೀಠದ ಪೀಠಾಧಿಕಾರಿ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ. ಎಸ್.ಆರ್.ನಿರಂಜನ್
ಅವರಿಗೆ ಗೌರವ ಡಾಕ್ಟೊರೇಟ್ ಪದವಿ ನೀಡಿ ಸನ್ಮಾನಿಸಲಾಯಿತು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಐ.ಕೆ.ರಿಯಾ ಒಟ್ಟು ಆರು ಚಿನ್ನದ ಪದಕಗಳೊಂದಿಗೆ ಅತಿ ಹೆಚ್ಚು ಚಿನ್ನ ಗಳಿಸಿದ ಗೌರವಕ್ಕೆ ಪಾತ್ರರಾದರು. ಆಟೋ ಚಾಲಕನ ಮಗಳು ಆರ್.ಟಿ.ಶಾಶ್ವತ (ಅರ್ಥಶಾಸ್ತ್ರ), ಅರ್ಚಕರ ಮಗಳು ಗೌರಿ ಮಣ್ಣೂರ (ಗಣಿತಶಾಸ್ತ್ರ), ಪತ್ರಿಕೆ ವಿತರಕ ಆರ್. ಲಕ್ಷ್ಮಣ (ಪತ್ರಿಕೋದ್ಯಮ) ಅವರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದು ವಿಶೇಷವಾಗಿತ್ತು. ರೈತರು, ಕಾರ್ಮಿಕರು, ಶಿಕ್ಷಕರು, ಚಾಲಕರ ಮಕ್ಕಳೂ ಸಹ ರ‍್ಯಾಂಕ್‌ನೊಂದಿಗೆ ಚಿನ್ನ ಗಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಗೌರವಾನ್ವಿತ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು. ಭಾರತೀಯ ವಿಜ್ಞಾನ ಸಂಸ್ಥೆ ಮಾಜಿ ನಿರ್ದೇಶಕ, ಪದ್ಮಭೂಷಣ ಪ್ರೊ.ಪಿ. ಬಲರಾಮ್ ಅವರು ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ.ಬಿ.ಡಿ.ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಲಸಚಿವ ಪ್ರೊ.ಆರ್.ಶಶಿಧರ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ಉಪಸ್ಥಿತರಿದ್ದರು.