SUDDIKSHANA KANNADA NEWS/ DAVANAGERE/ DATE:04-08-2024
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ದೂರುತ್ತಿರುವವರು ರಾಜ್ಯದ ದೊಡ್ಡ ಭ್ರಷ್ಟಾಚಾರಿಗಳು, ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಸಿ. ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಕಂಡ ಅಪ್ರತಿಮ ಸ್ವಚ್ಛ ರಾಜಕಾರಣಿ ಸಿದ್ದರಾಮಯ್ಯ ನವರು ,ಬಡವರು ದೀನದಲಿತರ ಏಳಿಗೆಗಾಗಿ ಶ್ರಮೀಸುತ್ತಿರುವ ಏಕೈಕ ವ್ಯಕ್ತಿ, ಅವರ ಏಳಿಗೆಯನ್ನು ಸಹಿಸದ ಕೋಮುವಾದಿ ರಾಜಕಾರಣಿಗಳು ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು.
ಭ್ರಷ್ಟಾಚಾರದಡಿಯಲ್ಲಿ ಸಿದ್ದರಾಮಯ್ಯನವರನ್ನು ಹತ್ತಿಕ್ಕುವ ಹುನ್ನಾರ: ರಾಜಕೀಯ ವ್ಯವಸ್ಥೆಯಲ್ಲಿ ಬಲಿಷ್ಠರಾಗಿರುವ ಸಿದ್ದರಾಮಯ್ಯ ನವರನ್ನು ಸಿ.ಎಂ ಸ್ಥಾನದಿಂದ ಕೆಳಗಿಳಿಸುವ ದೊಡ್ಡ ಷಡ್ಯಂತ್ರ ರೂಪಿಸಲಾಗುತ್ತಿದೆ. ಸಿಎಂ ವಿರುದ್ಧ ಹೋರಾಟಕ್ಕಿಳಿದವರಲ್ಲಿ ಬಹುತೇಕರು ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದವರೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರಿಗಳು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಯಾವ ನೈತಿಕತೆಯಿದೆ. ಸಾಮಾಜಿಕ ಹರಿಕಾರ, ಅಹಿಂದ ವರ್ಗದ ನಾಯಕನನ್ನು ಬಲಿಪಶು ಮಾಡಲು ಯತ್ನಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮೂಲಕ ನಮ್ಮ ಶಕ್ತಿ ಏನೆ೦ದು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೇಡಿನ ರಾಜಕಾರಣ ಮಾಡುವ ಕೋಮುವಾದಿಗಳು ಭ್ರಷ್ಟಾಚಾರದ ವಿರುದ್ಧ ಇರುವ ಸಿಎಂ ವಿರುದ್ಧ ಕಳಂಕ ತರಲು ವ್ಯವಸ್ಥಿತ ಪಿತೂರಿ ಮಾಡಿ ಅವರನ್ನುಸಿಎಂ ಕುರ್ಚಿಯಿಂದ ಕೆಳಗೆ ಇಳಿಸುವ ಹುನ್ನಾರ ಮಾಡುತ್ತಿದ್ದು, ಇದನ್ನು ಖಂಡಿಸಿ ಹಿಂದುಳಿದ ವರ್ಗಗಳ ಹೋರಾಟ ಸಮಿತಿಯು ಮುಂದಿನ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.