Home ದಾವಣಗೆರೆ ವಿಶೇಷ ಲೇಖನ: ಹೋರಾಟದ ಹಾದಿಯ ಧೀಮಂತ ನಾಯಕ ಬಿ. ಎಸ್. ಯಡಿಯೂರಪ್ಪ: 50 ವರ್ಷಗಳ ಸುವರ್ಣ ಪಯಣ
ದಾವಣಗೆರೆನವದೆಹಲಿಬೆಂಗಳೂರು

ವಿಶೇಷ ಲೇಖನ: ಹೋರಾಟದ ಹಾದಿಯ ಧೀಮಂತ ನಾಯಕ ಬಿ. ಎಸ್. ಯಡಿಯೂರಪ್ಪ: 50 ವರ್ಷಗಳ ಸುವರ್ಣ ಪಯಣ

Share
ಬಿ. ಎಸ್. ಯಡಿಯೂರಪ್ಪ
Share

ದಾವಣಗೆರೆ: ದಕ್ಷಿಣ ಭಾರತದ ರಾಜಕಾರಣದಲ್ಲಿ ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದವರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ. ದಾವಣಗೆರೆಯಂತಹ ನಗರಗಳಲ್ಲಿ ಬಿಜೆಪಿಗೆ ಹತ್ತು ಜನ ಕಾರ್ಯಕರ್ತರಿಲ್ಲದ ಕಾಲದಲ್ಲೂ ಎದೆಗುಂದದೆ, ಸೈಕಲ್ ತುಳಿಯುತ್ತಾ ಹಳ್ಳಿ ಹಳ್ಳಿಗೂ ಪಕ್ಷವನ್ನು ತಲುಪಿಸಿದ ಧೀಮಂತ ನಾಯಕ. ಸತತ 50 ವರ್ಷಗಳ ಕಾಲ ರಾಜಕೀಯದ ಏಳು-ಬೀಳುಗಳನ್ನು ಸಮಚಿತ್ತದಿಂದ ಎದುರಿಸಿದ ಅವರು, ಇಂದು ರಾಜ್ಯ ರಾಜಕಾರಣದ ‘ಅಜಾತಶತ್ರು’ವಾಗಿ ಬೆಳೆದು ನಿಂತಿದ್ದಾರೆ.

ಈ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹಾಗೂ ಬಿಜೆಪಿ ಯುವ ಮುಖಂಡ ಶಿವನಗೌಡ ಪಾಟೀಲ್ ಅವರು ವಿಶೇಷ ಲೇಖನ ಬರೆದಿದ್ದಾರೆ.

                                     ವಿಶೇಷ ಲೇಖನ: ಶಿವನಗೌಡ ಪಾಟೀಲ್, ಮಹಾನಗರ ಪಾಲಿಕೆ ಮಾಜಿ ಸದಸ್ಯ

ಯಡಿಯೂರಪ್ಪರ ಹೋರಾಟದ ಹಾದಿ, ಸಂಘರ್ಷದ ಹೋರಾಟ, ಬದುಕಿದ ಪರಿ, ರಾಜಕೀಯ ನಾಯಕರ ಬೆಳೆಸಿದ ಪರಿ, ಸಂಘಟನಾ ಚತುರ, ರಾಜ್ಯ ರಾಜಕಾರಣದ ರೈತಪರ ನಾಯಕರಷ್ಟೇ ಅಲ್ಲ, ಎಲ್ಲಾ ವರ್ಗದವರ ನೆಚ್ಚಿನ ನಾಯಕ ಯಡಿಯೂರಪ್ಪರ ಬದುಕಿನ ಕುರಿತು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ರೈತಪರ ನಿಲುವು ಮತ್ತು ಜನಪರ ಯೋಜನೆಗಳು:

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್.ವೈ, ಅಧಿಕಾರಕ್ಕೆ ಬಂದ ಮೇಲೆ ಅದನ್ನು ಮರೆಯಲಿಲ್ಲ. ಉಚಿತ ವಿದ್ಯುತ್, ಸಾಲ ಮನ್ನಾ ಮತ್ತು ಕೃಷಿ ಬಜೆಟ್ ಮಂಡನೆಯ ಮೂಲಕ ರೈತರ ಕಣ್ಮಣಿಯಾದರು. ಕೇವಲ ರೈತರಷ್ಟೇ ಅಲ್ಲದೆ, ಪ್ರತಿ ಮನೆಯ ಹೆಣ್ಣುಮಗುವನ್ನು ‘ಭಾಗ್ಯಲಕ್ಷ್ಮಿ’ ಎಂದು ಕರೆದು ಅವಳ ಹೆಸರಲ್ಲಿ ಬಾಂಡ್ ನೀಡಿದವರು. ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ವೃದ್ಧರಿಗೆ ‘ಸಂಧ್ಯಾ ಸುರಕ್ಷಾ’ ಯೋಜನೆಗಳ ಮೂಲಕ ಅವರು ಪ್ರತಿ ಮನೆಯ ಸದಸ್ಯರಾಗಿ ಬದಲಾದರು.

ಮುಖ್ಯಾಂಶಗಳು:

ಸಂಘಟನಾ ಚತುರ:

ದಾವಣಗೆರೆಯಂತಹ ನಗರಗಳಲ್ಲಿ ಹತ್ತು ಜನರಿಲ್ಲದ ಕಾಲದಿಂದ ಹಿಡಿದು, ಇಂದು ಹಳ್ಳಿ ಹಳ್ಳಿಯಲ್ಲೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಅಪ್ರತಿಮ ಹೋರಾಟಗಾರ.

ರೈತ ಮಿತ್ರ:

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಸಾಲ ಮನ್ನಾ, ಬಡ್ಡಿ ಮನ್ನಾ ಮತ್ತು ಲಕ್ಷಾಂತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಕೃಷಿಕರ ಬದುಕಿಗೆ ಆಸರೆಯಾದವರು.

ಭಾಗ್ಯಲಕ್ಷ್ಮಿ ಮತ್ತು ಸೈಕಲ್ ಯೋಜನೆ:

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ‘ಭಾಗ್ಯಲಕ್ಷ್ಮಿ’ ಯೋಜನೆ ಮತ್ತು ಶಾಲಾ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಸೈಕಲ್ ವಿತರಿಸಿದ ದೂರದೃಷ್ಟಿ.

ಸಾಮಾಜಿಕ ಭದ್ರತೆ:

ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ಮತ್ತು ವಿಧವಾ ವೇತನ ಹೆಚ್ಚಳದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವಯುತ ಬದುಕು ನೀಡಿದ ಆಡಳಿತಗಾರ.

ಸಾಂಸ್ಕೃತಿಕ ಮತ್ತು ಸಾಮಾಜಿಕ ನ್ಯಾಯ:

ಕನಕ, ವಾಲ್ಮೀಕಿ ಜಯಂತಿಗಳ ಆಚರಣೆ, ವಿವಿಧ ಪ್ರಾಧಿಕಾರಗಳ ರಚನೆ ಮತ್ತು ಸಮುದಾಯ ಭವನಗಳ ನಿರ್ಮಾಣದ ಮೂಲಕ ಶೋಷಿತ ವರ್ಗಗಳಲ್ಲಿ ಆತ್ಮಗೌರವ ತುಂಬಿದ ನಾಯಕ.

ಸಾಮಾಜಿಕ ನ್ಯಾಯದ ಹರಿಕಾರ:

ಉಪಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿದ್ದ ಅವರು, ಮುಖ್ಯಮಂತ್ರಿಯಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದ್ದ ಸಾಲವನ್ನೂ ಒಳಪಟ್ಟಂತೆ ರೈತನ ಬಡ್ಡಿ ಮನ್ನಾ ಮಾಡಿದರು. ಕರೆಂಟಿನ ಬಿಸಿಯಲ್ಲಿ ರೈತನ ಬದುಕು ಮತ್ತು ಬೆಳೆ ಸುಟ್ಟು ಹೋಗಬಾರದೆಂದು ಭಾವಿಸಿ ಆತನ ಲಕ್ಷಾಂತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದ ರೈತಪರ ನಾಯಕ.

ಇನ್ನೊಂದೆಡೆ ರಾಜಕಾರಣದಲ್ಲಿ ಶೀಘ್ರ ಕೋಪಿಯಾದರೂ, ರೈತರ ವಿಷಯದಲ್ಲಿ ಮಗುವಾಗುತ್ತಿದ್ದರು ಬಿಎಸ್‌ವೈ. ಹಾಗಾಗಿಯೇ ರಾಜ್ಯದಲ್ಲಿರುವ ಬರಪೀಡಿತ ಪ್ರದೇಶಗಳಲ್ಲೆಲ್ಲ ಕುಡಿಯುವ ನೀರು ಪೂರೈಕೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾಯಕಕ್ಕೆ ಕೈಹಾಕಿ ನೀರು ಕೊಟ್ಟ ಭಗೀರಥರಾದರು.

ಹಿಂದುಳಿದ ವರ್ಗಗಳ ಅಸ್ಮಿತೆ ಎತ್ತಿ ಹಿಡಿಯಲು ಕನಕದಾಸ, ವಾಲ್ಮೀಕಿ ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಮಾಡಿದ್ದು ಬಿ.ಎಸ್. ವೈ. ಅವರ ದೂರದೃಷ್ಟಿ. ಸಮುದಾಯ ಭವನಗಳ ನಿರ್ಮಾಣದ ಮೂಲಕ ಶೋಷಿತ ವರ್ಗಗಳಿಗೆ ಆಶ್ರಯ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂದು ಚಿತ್ರದುರ್ಗದ ಕೋಟೆ ನಾಡಿನಲ್ಲಿ ನಡೆಯುತ್ತಿರುವ ‘ಅಭಿಮಾನೋತ್ಸವ’ವು ಕೇವಲ ಒಂದು ಸಂಭ್ರಮವಲ್ಲ, ಅದು ಒಬ್ಬ ವ್ಯಕ್ತಿಯ ನಿಸ್ವಾರ್ಥ ಹೋರಾಟಕ್ಕೆ ನಾಡು ಸಲ್ಲಿಸುತ್ತಿರುವ ಗೌರವ.

ಕೋಟೆ ನಾಡು ಚಿತ್ರದುರ್ಗದಲ್ಲಿ ಮೇ.9ಕ್ಕೆ ನಡೆಯಲಿರುವ ಈ ಅಭಿಮಾನೋತ್ಸವ ಕಾರ್ಯಕ್ರಮವು ಅವರ ದಶಕಗಳ ಕಾಲದ ಹೋರಾಟಕ್ಕೆ ಸಲ್ಲಿಸುವ ಸೂಕ್ತ ಗೌರವವಾಗಿದೆ. ಮಾತ್ರವಲ್ಲ, ರಾಜಕೀಯ ಮುತ್ಸದ್ಧಿಗೆ ಸಲ್ಲಿಸುವ ಗೌರವಪೂರ್ವಕವಾದ ಐತಿಹಾಸಿಕ ಕಾರ್ಯಕ್ರಮವೂ ಹೌದು.

Share

Leave a comment

Leave a Reply

Your email address will not be published. Required fields are marked *