SUDDIKSHANA KANNADA NEWS/ DAVANAGERE/ DATE:20-08-2024
ದಾವಣಗೆರೆ: ತಾಲೂಕಿನ ಕುರ್ಕಿ ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಯ 6/3ನೇ ಸೇತುವೆ ಮಂಗಳವಾರ ಕುಸಿದು ಬಿದ್ದಿದ್ದು, ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಕುಸಿದು ಬಿದ್ದ ಸೇತುವೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ದುರಸ್ತಿ ಮಾಡಲು ಸೂಚನೆ ನೀಡಿದರು.
ಭದ್ರಾ ಜಲಾಶಯದಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕಾಲುವೆಗಳಿಗೆ ಈಗಾಗಲೇ ನೀರು ಬಿಡಲಾಗಿದೆ. ಅಲ್ಲದೇ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕುರ್ಕಿ ಗ್ರಾಮದ ಬಳಿ ಇರುವ ಭದ್ರಾ ಕಾಲುವೆಯ ಜಂಕ್ಷನ್ ನ ಬಳಿ ಹರಹರ ಮತ್ತು ಹರಪನಹಳ್ಳಿಗೆ ನೀರು ಬಿಡುವ ಗೇಟ್ ಬಳಿ 6/3ನೇ ಭದ್ರಾ ಕಾಲುವೆಯ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಒಂದೆಡೆ ಜಮೀನುಗಳಿಗೆ ನೀರು ನುಗ್ಗಿದೆ. ಅಲ್ಲದೇ ನೀರು ಹರಿಹರ ಮತ್ತು ಹರಪನಹಳ್ಳಿ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿದರೆ, ಈ ಭಾಗದ ರೈತರಿಗೆ ನೀರು ಸಿಗುವುದಿಲ್ಲ.
ಈ ಸಮಸ್ಯೆಯನ್ನು ಮನಗಂಡ ಶಾಸಕ ಕೆ.ಎಸ್.ಬಸವಂತಪ್ಪ, ಬೆಂಗಳೂರಿನ ನೀರಾವರಿ ನಿಗಮದ ವ್ಯವಸ್ಥಾಪಕರನ್ಬು ದೂರವಾಣಿ ಮೂಲಕ ಸಂಪರ್ಕ ಮಾಡಿ ಸೇತುವೆ ಕುಸಿದು ಇಲ್ಲಿ ಆಗಿರುವ ಸಮಸ್ಯೆ ಬಗ್ಗೆ ವಿವರಿಸಿದರು.
ಕುಸಿದಿರುವ ಸೇತುವೆಯನ್ನು ತಾತ್ಕಾಲಿಕವಾಗಿ ತುರ್ತು ದುರಸ್ತಿಗೊಳಿಸಲು ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಕೂಡಲೇ ಸೇತುವೆಯನ್ನು ದುರಸ್ತಿಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಬೇಕೆಂದು ಸ್ಥಳದಲ್ಲೇ ಇದ್ದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಕಬ್ಬೂರು, ರಾಮಗೊಂಡನಹಳ್ಳಿ ಸೇತುವೆ ಕಿತ್ತಿದೆ. ಹೊನ್ನೂರು ಬಳಿ ಟೂಬ್ ಕಿತ್ತು ಜಮೀನುಗಳಿಗೆ ನೀರು ನುಗ್ಗಿದೆ. ಇದೇ ರೀತಿ ಮಾಯಕೊಂಡ ಕ್ಷೇತ್ರದ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕಾಲುವೆಗಳು ಮತ್ತು ಸೇತುವೆಗಳು ಶಿಥಿಲಗೊಂಡಿರುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಈಗಾಗಲೇ ನೀರಾವರಿ ನಿಗಮಕ್ಕೆ ವರದಿ ಸಲ್ಲಿಸಲಾಗಿದೆ. ಸೇತುವೆ ಮತ್ತು ಕಾಲುವೆ ಆಧುನೀಕರಣ ಮಾಡದಿದ್ದರೆ 10 ರುಪಾಯಿ ಖರ್ಚು ಮಾಡುವ ಬದಲು 100 ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಬರುತ್ತದೆ. ಹೀಗಾಗಿ ವಿಳಂಬ ಮಾಡದೆ ಭದ್ರಾ ಕಾಲುವೆಗಳು ಮತ್ತು ಸೇತುವೆಗಳನ್ನು ಆಧುನೀಕರಣಗೊಳಿಸಬೇಕೆಂದು ನೀರಾವರಿ ನಿಗಮದ ವ್ಯವಸ್ಥಾಪಕರಿಗೆ ಮನವರಿಕೆ ಮಾಡಿರುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎಇಇ ಮನೋಜ್, ಇಇ ಮಂಜುನಾಥ್, ಇಂಜಿನಿಯರ್ ಸತೀಶ್, ಗ್ರಾಮಸ್ಥರಾದ ನಂದ್ಯಪ್ಪ, ವೀರೇಂದ್ರ ಚಾರ್ಯ, ಶಿವಜ್ಜ ,ಮರುಳಸಿದ್ದಪ್ಪ,ಹಾಲೇಶ್,ರಾಮಗೊಂಡಹಳ್ಳಿ ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರಿದ್ದರು.