ಶಿವಮೊಗ್ಗ: ಬಿಜೆಪಿಯವರ ವಿಷಗುರು ದೆಹಲಿಯಲ್ಲಿ ಕೂತಿದ್ದಾರೆ. ಇವರು ತಮ್ಮ ಪೂಜ್ಯ ತಂದೆ ಹೆಸರು ಬಳಸಿದರೆ, ಪ್ರಧಾನಿ ನರೇಂದ್ರ ಮೋದಿ ತನ್ನ ದಿವಂಗತ ತಾಯಿಯನ್ನ ನೋಟು ರದ್ದಾದಾಗ ಬ್ಯಾಂಕ್ ಮುಂದೆ ನಿಲ್ಲಿಸಿದ್ದರಾ? 90 ವರ್ಷದ ಹಿರಿಯ ಮಹಿಳೆಯರು ಬ್ಯಾಂಕ್ ಮುಂದೆ ನಿಂತಿರಲಿಲ್ವಾ. ಒಳ್ಳೆಯ ಗಂಡು ಮಗ ಯಾರಾದರೂ ತಾಯಿಯನ್ನು ಬಿಸಿಲಲ್ಲಿ ನಿಲ್ಲಿಸುತ್ತಾರಾ? ಇಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ತಂದೆಯನ್ನು ಜೈಲಿಗೆ ಕಳುಸಿದ್ದು, ಅವರನ್ನೇ ಬಿಜೆಪಿಯವರು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.
ಶಿಕಾರಿಪುರದಲ್ಲಿ ನಡೆದ ಜನತಾ ಜೋಡೋ ಜಾಗೃತಿ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.
ಅವರು ನಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. 2008ರಲ್ಲಿ ಯಡಿಯೂರಪ್ಪ ಸಿಎಂ ಆದರು. ಅವರಿಗೆ ಶಾಸಕರ ಬೆಂಬಲ ಇರಲಿಲ್ಲ. ಆಗ ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿ ಮಾಡಿ ರಾಜ್ಯದ ಕೀರ್ತಿಯನ್ನು ನಾಶ ಮಾಡಿದರು. ಕನ್ನಡಿಗರ ಘನತೆ ಗೌರವ ನುಚ್ಚುನೂರು ಮಾಡಿದ್ದಾರೆ. ಕೆಜೆಪಿ ಮಾಡಿದರು. ಟಿಪ್ಪು ಸುಲ್ತಾನ್ ರೀತಿ ಕತ್ತಿ ಹಿಡಿದು, ನಂತರ ಬಿಜೆಪಿ ಸೇರಿದ ಮೇಲೆ ಟಿಪ್ಪು ಟೀಕಿಸಿ ಗೋಸುಂಬೆ ನಾಚುವ ರೀತಿ ಬಣ್ಣ ಬದಲಿಸಿದರು ಎಂದು ಕಿಡಿಕಾರಿದರು.
ನಮ್ಮ ಪೂರ್ವಜರು ಸಾವಿರಾರು ಜನರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವತಂತ್ರ ಸಿಕ್ಕಿದೆ. ನಮ್ಮ ನಾಯಕರು ಈ ದೇಶವನ್ನು ಆಧುನಿಕ ಭಾರತವಾಗಿ ನಿರ್ಮಿಸಿದ್ದಾರೆ. ಈ ಭವ್ಯ ಭಾರತದಲ್ಲಿ ತಾರತಮ್ಯವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ, ಚುನಾವಣೆ ವ್ಯವಸ್ಥೆ ನೀಡಿದ್ದಾರೆ. ಬಿಜೆಪಿಯವರು ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರು ಧರ್ಮದ ಹೆಸರಲ್ಲಿ, ಶಾಸಕರ ಖರೀದಿ ಮಾಡಿದ್ದಾರೆ ಎಂದು ಗುಡುಗಿದರು.





Leave a comment