SUDDIKSHANA KANNADA NEWS/ DAVANAGERE/ DATE: 12-04-2023
ದಾವಣಗೆರೆ (DAVANAGERE): ದಾವಣಗೆರೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಬಿಜೆಪಿ (BJP) ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿಲ್ಲ. ಹೊನ್ನಾಳಿ (HONNALI), ಜಗಳೂರು (JAGALURU), ಹರಿಹರ (HARIHARA)ದಲ್ಲಿ ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಆಪ್ತರಿಗೆ ಟಿಕೆಟ್ (TICKET)ಘೋಷಿಸಲಾಗಿದೆ. ದಾವಣಗೆರೆ ಉತ್ತರ (NORTH), ದಾವಣಗೆರೆ ದಕ್ಷಿಣ, ಚನ್ನಗಿರಿ, ಮಾಯಕೊಂಡ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಆಕಾಂಕ್ಷಿಗಳು ಹೆಚ್ಚಿದ್ದಾರೆ.
ಹೊನ್ನಾಳಿಯಿಂದ ಎಂ. ಪಿ. ರೇಣುಕಾಚಾರ್ಯ (M. P. RENUKACHARYA) , ಜಗಳೂರಿನಿಂದ ಎಸ್. ವಿ. ರಾಮಚಂದ್ರ, ಹರಿಹರದಿಂದ ಬಿ. ಪಿ. ಹರೀಶ್ (B. P. HARISH)ಗೆ ಕೇಸರಿ ಪಡೆ ಟಿಕೆಟ್ ಘೋಷಿಸಿದೆ. ಈ ಮೂವರು ಯಡಿಯೂರಪ್ಪರ ಆಪ್ತರೇ. ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ 2013ರಲ್ಲಿ ಯಡಿಯೂರಪ್ಪ ಕಟ್ಟಿದ್ದ ಕೆಜೆಪಿಗೆ ಹೋಗಿ ಸ್ಪರ್ಧೆ ಮಾಡಿದ್ದರು. ಎಸ್. ವಿ. ರಾಮಚಂದ್ರ ಮೊದಲು ಕಾಂಗ್ರೆಸ್ ನಲ್ಲಿದ್ದರು. ಆಪರೇಷನ್ ಕಮಲದ ಮೂಲಕ ಬಿಜೆಪಿ (BJP) ಸೇರ್ಪಡೆಯಾಗಿದ್ದರು. ಹರೀಶ್ ಅವರು ಮೊದಲಿನಿಂದಲೂ ಬಿಎಸ್ ವೈ (BSY) ಬಣದಲ್ಲಿ ಗುರುತಿಸಿಕೊಂಡಿದ್ದವರು. ಮಾಡಾಳ್ ವಿರೂಪಾಕ್ಷಪ್ಪ (MADAL VIRUPAKSHAPPA) ಸಹ ಕೆಜೆಪಿ(KJP) ಗೆ ಹೋಗಿದ್ದರು. ಆದ್ರೆ, ಪುತ್ರನ ಲಂಚ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿರುವುದರಿಂದ ಚನ್ನಗಿರಿಯಲ್ಲಿ ಟಿಕೆಟ್ (TICKET) ಯಾರಿಗೆ ಎಂಬುದನ್ನು ಹೇಳಿಲ್ಲ.

ಈಗ ಚರ್ಚೆಗೆ ಬಂದಿರುವುದು ಪಕ್ಷ ಬಿಟ್ಟು ಹೋಗಿ ಬಂದವರಿಗೆ ಮಣೆ ಹಾಕಲಾಗಿದೆ. ಹಾಗಾಗಿ, ಸಂಘ ಪರಿವಾರದ ನಾಯಕರು ಪಕ್ಷಕ್ಕೆ ದ್ರೋಹ ಬಗೆದು ಹೋಗಿ ಮತ್ತೆ ಅವರನ್ನು ಬೆಳೆಸಿದರೆ ನಿಷ್ಠಾವಂತರ ಗತಿ ಏನು ಎಂಬ ಪ್ರಶ್ನೆ ಎತ್ತಿದೆ.
ಸಂಘ ಪರಿವಾರದ ಇಬ್ಬರಿಗೆ ಈ ನಾಲ್ಕು ಕ್ಷೇತ್ರಗಳ ಪೈಕಿ ಎರಡು ಸ್ಥಾನವನ್ನಾದರೂ ನೀಡಬೇಕೆಂಬ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಎಸ್. ಟಿ. ವೀರೇಶ್,
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅಜಯ್ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಆನಂದಪ್ಪ, ಪ್ರಸನ್ನಕುಮಾರ್ ಈ ನಾಲ್ವರ ಪೈಕಿ ಒಬ್ಬರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ. ಹಾಗಾಗಿ, ಈ ನಾಲ್ವರ ಹೆಸರೂ ಮುಂಚೂಣಿಯಲ್ಲಿದೆ.
3 ನೇ ತಲೆಮಾರಿಗೆ ಟಿಕೆಟ್…?
ಇನ್ನು ಸಂಸದ ಜಿ. ಎಂ. ಸಿದ್ದೇಶ್ವರ ಅವರು ತನ್ನ ಪುತ್ರ ಜಿ. ಎಸ್. ಅನಿತ್ ಕುಮಾರ್ ಗೆ ಟಿಕೆಟ್ ನೀಡುವಂತೆ ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಮೂರು ತಲೆಮಾರಿಗೆ ಟಿಕೆಟ್ ಕೊಟ್ಟಂತಾಗುತ್ತದೆ. ಇದು ಕುಟುಂಬ ರಾಜಕಾರಣ ಅಲ್ಲವೇ? ನಿಮ್ಮ ತಂದೆ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದರು. ನೀವು ನಾಲ್ಕು ಬಾರಿ ಎಂಪಿ ಆಗಿದ್ದೀರಾ. ಈಗ ನಿಮ್ಮ ಪುತ್ರನಿಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಕೇವಲ 30 ವರ್ಷಗಳಲ್ಲಿ ಮೂರು ತಲೆಮಾರಿಗೆ ಟಿಕೆಟ್ ಕೊಡಬೇಕಾ ಎಂಬ ಪ್ರಶ್ನೆ ಹೈಕಮಾಂಡ್ ನದ್ದಾಗಿದೆ. ಆದರೂ ರೇಸ್ ನಲ್ಲಿ ಅನಿತ್ ಕುಮಾರ್ ಹೆಸರಿದೆ.

ಚಿತ್ರದುರ್ಗದಲ್ಲಿ ಟಿಕೆಟ್ ಬಯಸಿದ್ದರೂ ತಿಪ್ಪಾರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದೆ. ಶತಾಯಗತಾಯ ಟಿಕೆಟ್ ಅನ್ನು ಪುತ್ರನಿಗೆ ಕೊಡಿಸಲು ಜಿ. ಎಂ. ಸಿದ್ದೇಶ್ವರ ಅವರು ಬೆಂಗಳೂರು, ದೆಹಲಿಗೆ ಹೋಗಿ ಬಂದಿದ್ದಾರೆ. ನಿಮ್ಮ ಮೂರನೇ ತಲೆಮಾರಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರಿಗೆ ಬೇರೆ ಸಂದೇಶ ಹೋಗುತ್ತದೆ. ಆ ಕಾರಣಕ್ಕೆ ಸುಮ್ಮನಿರಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಲೋಕಿಕೆರೆ ನಾಗರಾಜ್ ಅವರ ಹೆಸರೂ ಚಾಲ್ತಿಯಲ್ಲಿದೆ.
ಸಂಘ ಪರಿವಾರದ ಎಸ್. ಟಿ. ವೀರೇಶ್ ಅವರ ಹೆಸರೂ ಚರ್ಚಿತವಾಗುತ್ತಿದೆ.
ರೇಣುಕಾಚಾರ್ಯರು ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಲು ಕಣಕ್ಕಿಳಿಯಲಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಜಯಿಸಿದ್ದ ಎಸ್. ವಿ. ರಾಮಚಂದ್ರ ಅವರು ಜಗಳೂರಿನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಅದೇ ರೀತಿಯಲ್ಲಿ ಹರಿಹರ ಕ್ಷೇತ್ರದಿಂದ ಕಳೆದ ಬಾರಿ ಪರಾಭವಗೊಂಡಿದ್ದ ಬಿ. ಪಿ. ಹರೀಶ್ ಗೆ ಮಣೆ ಹಾಕಲಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಚಂದ್ರಶೇಖರ ಪೂಜಾರ್ ಟಿಕೆಟ್ ಗೆ ಭಾರೀ ಪ್ರಯತ್ನ ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಮೂವರು ಒಟ್ಟಿಗೆ ಪ್ರಚಾರ ನಡೆಸುವ ಮೂಲಕ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದು ಆಣೆ ಪ್ರಮಾಣ ಮಾಡಿದ್ದರು.
ಗ್ರಾಮ ಗ್ರಾಮಗಳಿಗೆ ತೆರಳಿ ಟಿಕೆಟ್ ಗೆ ಮುನ್ನವೇ ಪ್ರಚಾರ ಕೈಗೊಂಡಿದ್ದ ಈ ಮೂವರು ಆಕಾಂಕ್ಷಿಗಳ ಪೈಕಿ ಯಡಿಯೂರಪ್ಪರ ಆಪ್ತರಾಗಿದ್ದ ಕಾರಣ ಬಿ. ಪಿ. ಹರೀಶ್ ಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಪ್ರಕಟಿಸಿದೆ. ಕಳೆದ ಬಾರಿಯ ಸೋಲು
ಈ ಬಾರಿ ಮರುಕಳಿಸಬಾರದು ಎಂಬ ಕಾರಣಕ್ಕೆ ಆಕಾಂಕ್ಷಿಗಳು ಒಗ್ಗಟ್ಟಿನ ಜಪ ಮಾಡಲು ಶುರು ಮಾಡಿದ್ದಾರೆ.
ಚನ್ನಗಿರಿ ಕಥೆ ಏನು…?
ಲೋಕಾಯುಕ್ತ ದಾಳಿ ವೇಳೆ ಕಂತೆ ಕಂತೆಗಟ್ಟಲೇ ಕೋಟ್ಯಾಂತರ ಸಿಕ್ಕ ಬಳಿಕ ಚನ್ನಗಿರಿ (CHANNAGIRI) ಕ್ಷೇತ್ರವು ರಾಜ್ಯ ಮಾತ್ರವಲ್ಲ ರಾಷ್ಟ್ರದಲ್ಲಿ ಕುಖ್ಯಾತಿ ಪಡೆದಿದೆ. ಇದಕ್ಕೆ ಕಾರಣ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು. ಈ ಪ್ರಕರಣದಲ್ಲಿ ಈಗಾಗಲೇ ಬಿಜೆಪಿ (BJP) ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲುಪಾಲಾಗಿದ್ದಾರೆ.
ಈ ಬಾರಿ ಬಿಜೆಪಿಯಿಂದ ಮಾಡಾಳ್ ವಿರೂಪಾಕ್ಷಪ್ಪರ ಬದಲಾಗಿ ಮಾಡಾಳ್ ಮಲ್ಲಿಕಾರ್ಜುನ್ ಕಣಕ್ಕಿಳಿಯುತ್ತಾರೆ ಎಂದು ಪ್ರಚಾರ ಮಾಡಲಾಗಿತ್ತು. ಕ್ಷೇತ್ರಾದ್ಯಂತ ಮಲ್ಲಿಕಾರ್ಜುನ್ ಸುತ್ತಾಟ ನಡೆಸಿದ್ದಾರೆ. ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಓಡಾಟ ನಡೆಸಿದ್ದರು. ಆದ್ರೆ, ಈಗ ಬಿಜೆಪಿ ಮಾಡಾಳ್ ಕುಟುಂಬಕ್ಕೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೂ ಎರಡನೇ ಪಟ್ಟಿ ಪ್ರಕಟದ ಬಳಿಕ ಮಲ್ಲಿಕಾರ್ಜುನ್ ಅವರ ನಿರ್ಧಾರ ಗೊತ್ತಾಗುತ್ತದೆ. ಬಿಜೆಪಿ ಟಿಕೆಟ್ ಕೊಟ್ಟರೆ ಕಮಲ ಚಿಹ್ನೆಯಡಿ ಕಣಕ್ಕಿಳಿಯುತ್ತಾರೆ. ಇಲ್ಲದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯುವ ಕುರಿತಂತೆ ಈಗಾಗಲೇ ನಿರ್ಧರಿಸಿದ್ದು, ಎಲ್ಲಾ ಕಡೆಗಳಲ್ಲಿ ಪ್ರಚಾರ ನಡೆಸಲು ಶುರು ಮಾಡಿದ್ದಾರೆ.
ವಡ್ನಾಳ್ ಅಶೋಕ್ ಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದು, ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನ ಶುರು ಮಾಡಿದ್ದಾರೆ. ವಡ್ನಾಳ್ ರಾಜಣ್ಣ ಈ ಹಿಂದೆ ಬಿಜೆಪಿಯಲ್ಲಿದ್ದರು. ಆಗ ಕಮಲ ಪಡೆ ಕಟ್ಟಿದ್ದರು. ಈಗ ವಡ್ನಾಳ್ ಅಶೋಕ್ ಸಹ ತಮ್ಮದೇ ಆದ ರೀತಿಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಯತ್ನ ಮುಂದುವರಿಸಿದ್ದಾರೆ. ಹೈಕಮಾಂಡ್ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಾಗುವುದಿಲ್ಲ. ಹಾಗಾಗಿ, ಅವರೂ ಸಹ ಬಿಜೆಪಿಯ ಎರಡನೇ ಪಟ್ಟಿ ಪ್ರಕಟದತ್ತ ಚಿತ್ತ ಹರಿಸಿದ್ದಾರೆ.
ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್ ಸಹ ಕ್ಷೇತ್ರಾದ್ಯಂತ ಓಡಾಟ ನಡೆಸಿದ್ದು, ಬಿಜೆಪಿ ಆಕಾಂಕ್ಷಿಯಾಗಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪರ ಲಂಚ ಪ್ರಕರಣದ ಬಳಿಕ ಸಕ್ರಿಯರಾಗಿರುವ ಶಿವಕುಮಾರ್ ಅವರ ಹೆಸರು ಸಹ ಮುಂಚೂಣಿಯಲ್ಲಿದೆ. ಶಿವಮೊಗ್ಗ (SHIVAMOGGA) ನಗರ (CITY) ಕ್ಷೇತ್ರಕ್ಕೆ ಟಿಕೆಟ್ ನೀಡದಿದ್ದರೆ ಚನ್ನಗಿರಿಯಿಂದ ಕಣಕ್ಕಿಳಿಯಲು ಟಿಕೆಟ್ (TICKET) ನೀಡುವಂತೆ ಡಾ. ಧನಂಜಯ ಸರ್ಜಿ ಕೇಳಿದ್ದರು. ಒಟ್ಟಾರೆ, ದಾವಣಗೆರೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ವರಿಷ್ಠರು ಸಂಘ ಪರಿವಾರದವರಿಗೆ ಮಣೆ ಹಾಕುತ್ತಾ? ಇಲ್ಲವೇ ಯಡಿಯೂರಪ್ಪರು ಹೇಳಿದವರಿಗೆ ಟಿಕೆಟ್ ಘೋಷಿಸುತ್ತಾ ಎಂಬ ಕುತೂಹಲವೂ ಗರಿಗೆದರಿದೆ.