SUDDIKSHANA KANNADA NEWS/ DAVANAGERE/ DATE:22-03-2024
ದಾವಣಗೆರೆ: ಲಗಾನ್ ಚಿತ್ರವನ್ನು ಬಹುತೇಕ ಎಲ್ಲರೂ ನೋಡಿದ್ದೇವೆ. ಬ್ರಿಟೀಷರ ಅಧಿಕಾರ ಮತ್ತು ಭಾರತದ ಸ್ವಾಭಿಮಾನದ ನಡುವಿನ ಕ್ರಿಕೆಟ್ ಹಣಾಹಣಿಯಲ್ಲಿ ಅಂತಿಮವಾಗಿ ಭಾರತೀಯರ ಒಗ್ಗಟ್ಟು ಗೆದ್ದು ಹಿಗ್ಗಿದ ಚಿತ್ರವದು. ಲಗಾನ್ ರೀತಿಯಾದ ಕತೆಯು ದಾವಣಗೆರೆ ಬಿಜೆಪಿಯಲ್ಲಿ ಮತ್ತೊಮ್ಮೆ ಪುನಾರವರ್ತನೆ ಆಗುವ ಎಲ್ಲ ಚಿತ್ರಣಗಳು ಜಿಲ್ಲೆಯಲ್ಲೀಗ ಸ್ಷಷ್ಟವಾಗಿ ಗೋಚರವಾಗುತ್ತಿದೆ.
ಸತತ ನಾಲ್ಕು ಬಾರಿ ಬಿಜೆಪಿ ಟಿಕೆಟ್ ಪಡೆದು ಸಂಸದರಾದ ಜಿ.ಎಂ.ಸಿದ್ದೇಶ್ವರ ಅವರಿಗೆ ಈ ಬಾರಿ ಜಿಲ್ಲಾದ್ಯಂತ ತೀವ್ರವಾದ ವಿರೋಧ ವ್ಯಕ್ತವಾಗಿದೆ. ಬಹು ಮುಖ್ಯವಾಗಿ, ದಾವಣಗೆರೆ ಜಿಲ್ಲೆಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವರ್ಷವಷ್ಟೇ ಸ್ಪರ್ಧಿಸಿ ಸೋತಿರುವ ಎಲ್ಲ ನಾಯಕರೂ ದಾವಣಗೆರೆ ಜಿಲ್ಲೆಗೆ ಜಿ.ಎಂ. ಬೇಡವೇ ಬೇಡ ಎಂದು ಒತ್ತಾಯವನ್ನು ಕಳೆದ ಏಳೆಂಟು ತಿಂಗಳಿನಿಂದ ಘಂಟಾಘೋಷವಾಗಿ ಹೇಳಿಕೊಂಡು ಬಂದಿದ್ದಾರೆ.
ಐದನೇ ಬಾರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆಗೆ ಇಚ್ಛಿಸಿದ್ದ ಜಿ.ಎಂ.ಸಿದ್ದೇಶ್ವರ ಜಿಲ್ಲಾ ನಾಯಕರ ಒಟ್ಟಾದ ವಿರೋಧವು ಸೀರೆಯಲ್ಲಿಟ್ಟ ಕೆಂಡವಾಗಿದ್ದು ಸುಳ್ಳಲ್ಲ. ಇಷ್ಟಾದರೂ, ತಮ್ಮೆಲ್ಲ ರಾಜಕೀಯ ಪ್ರಭಾವ, ಬಲ, ರಾಷ್ಟೀಯ ನಾಯಕರ ಸಂಪರ್ಕದಿಂದಾಗಿ ಜಿ.ಎಂ. ಸಿದ್ದೇಶ್ವರ ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿ.ಎಂಗೆ ಟಿಕೇಟ್ ಕೊಡಬಾರದು ಎಂಬ ಜಿಲ್ಲಾ ನಾಯಕರ ಹಕ್ಕೋತ್ತಾಯ ಈಡೇರಿದ್ದರೂ ಮತ್ತೆ ಜಿ.ಎಂ ಕುಟುಂಬಕ್ಕೇ ಟಿಕೇಟ್ ಒಲಿದಿರುವುದು ಎಲ್ಲರಿಗೂ ತೀವ್ರ ನಿರಾಸೆ, ಕೋಪ, ಅಸಮಾಧಾನ ಮೂಡಿಸಿದೆ. ಈಗಾಗಲೇ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಘೋಷಿಸಿ, ಮೊನ್ನೆ ನಡೆದ ಶಿವಮೊಗ್ಗ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯವರ ಜತೆ ಗಾಯತ್ರಿ ಅವರು ರ‍್ಯಾಲಿ ಮಾಡಿದ್ದರೂ ಕೂಡ ದಾವಣಗೆರೆ ಜಿಲ್ಲಾ ನಾಯಕರು ತಮ್ಮ ಪಟ್ಟನ್ನು ಮಾತ್ರ ಕೊಂಚವೂ ಸಡಿಲಿಕೆ ಮಾಡುತ್ತಿಲ್ಲ.
ಇದುವೇ ಲಗಾನ್ ಕತೆ!:
ಶತಾಯಗತಾಯ ದಾವಣಗೆರೆಯ ಬಿಜೆಪಿಯನ್ನು ಈ ಬಾರಿ ಜಿ.ಎಂ. ಸಿದ್ದೇಶ್ವರ ಮತ್ತವರ ಕುಟುಂಬದ ಹಿಡಿತದಿಂದ ಹೊರತರುತ್ತೇವೆ ಎಂಬುದು ಜಿಲ್ಲಾ ಬಿಜೆಪಿ ನಾಯಕರ ತಂಡದ ಶಪಥವಾಗಿದ್ದು, ತಂಡಕ್ಕೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರೇ ಕ್ಯಾಪ್ಟನ್!
ಇವರೊಂದಿಗೆ ಮಾಜಿ ಸಚಿವರಾದ ಜಿ. ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ. ಟಿ.ಜಿ.ರವಿಕುಮಾರ್, ಸೋಮೇಶ್ವರ ಸುರೇಶ್, ಎಲ್. ಎನ್. ಕಲ್ಲಪ್ಪ ಅವರ ಸಶಕ್ತ ತಂಡವಿದೆ.
ಈ ಹನ್ನೊಂದು ಜನರ ತಂಡವು ಲಗಾನ್ ಚಿತ್ರದಲ್ಲಿ ಭಾರತೀಯರು ಬ್ರಿಟೀಷರನ್ನು ಸೋಲಿಸಿದಂತೆ, ದಾವಣಗೆರೆ ಬಿಜೆಪಿಯನ್ನು ಜಿ.ಎಂ. ಸಿದ್ದೇಶ್ವರ ಮುಕ್ತ ಮಾಡುವ ಸಂಕಲ್ಪ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ನಮ್ಮೆಲ್ಲ ತನು, ಮನ, ಧನ ವ್ಯಯಿಸಲಿದ್ದು, ಯಾವುದೇ ಕಾರಣಕ್ಕೂ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆ ಸಂಸದರಾಗುವುದಕ್ಕೆ ಸುತಾರಂ ಒಪ್ಪಿಗೆ ಇಲ್ಲವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ದಾವಣಗೆರೆ ವಾಜಪೇಯಿ ಎಂಬ ಖ್ಯಾತಿಯ ಮಾಜಿ ಶಾಸಕ ಟಿ. ಗುರುಸಿದ್ಧನಗೌಡರು ದಾವಣಗೆರೆ ಲಗಾನ್ ತಂಡದ ಕೋಚ್ ಆಗಿದ್ದು, ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿರುವ ಈ ಎಲ್ಲ ನಾಯಕರು ಜಿ.ಎಂ. ಸಿದ್ದೇಶ್ವರ ಮತ್ತವರ ಕುಟುಂಬದ ವಿರುದ್ಧ ಊದಿರುವ ರಣಕಹಳೆ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಕರ್ನಾಟಕದ ಬೇರಾವ ಜಿಲ್ಲೆಯಲ್ಲೂ ಇರದ ಈ ಮಟ್ಟಿನ ವಿರೋಧವನ್ನು ಕಂಡು ಸ್ವತಃ ಬಿಜೆಪಿ ನಾಯಕರೂ ಕೂಡ ಪೆಚ್ಚಾಗಿದ್ದಾರೆ. ಸಿದ್ದೇಶ್ವರ ಕುಟುಂಬಕ್ಕೆ ಈಗಾಗಲೇ ಟಿಕೆಟ್ ಕೊಟ್ಟು, ಈಗ ಹಿಂಪಡೆಯಲಾಗದೇ ಕೈ ಕೈ ಹಿಚುಕುವ ಪರಿಸ್ಥಿತಿ ಬಿಜೆಪಿ ಹೈಕಮ್ಯಾಂಡ್‌ನದ್ದು!