SUDDIKSHANA KANNADA NEWS/ DAVANAGERE/ DATE:20-01-2025
ದಾವಣಗೆರೆ: ಮಾತೆತ್ತಿದರೆ ಪೂಜ್ಯ ತಂದೆ ಬಿ. ಎಸ್. ಯಡಿಯೂರಪ್ಪ ಅವರು ಎನ್ನುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನಿನ್ನ ಸಾಧನೆ ಹೇಳಪ್ಪ. ಅದನ್ನು ಬಿಟ್ಟು ಯಾವಾಗಲೂ ಪೂಜ್ಯ ತಂದೆಯವರು ಪಕ್ಷ ಕಟ್ಟಿದರು ಎಂದು ಹೇಳುವುದನ್ನು ಮೊದಲು ಬಿಡಲಿ. ರಾಜ್ಯಾಧ್ಯಕ್ಷರಾಗಿ ಮಾಡಿರುವ ಸಾಧನೆ ಮುಂದಿಡಿ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರರಿಗೆ ಅನುಭವದ ಕೊರತೆ ಇರುವುದು ನಿಜ. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ರಾಜ್ಯದಲ್ಲಿ ಪ್ರವಾಸ ಮಾಡಿದರೆ ಪಕ್ಷದ ಕಾರ್ಯಕರ್ತರು, ಮುಖಂಡರು ಸುಮ್ಮನೆ ಬಿಡಲ್ಲ ಎಂಬ ಹೇಳಿಕೆ ನೀಡಿರುವುದು ಬಾಲಿಶತನ ಎಂದು ಕಿಡಿಕಾರಿದರು.
17 ಶಾಸಕರ ಜೊತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಜೊತೆ ಬಂದಿದ್ದಾಕ್ಕಾಗಿಯೇ ಯಡಿಯೂರಪ್ಪ ಸಿಎಂ ಆಗಲು ಸಾಧ್ಯವಾಯಿತು. ಅದನ್ನು ಮರೆತು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಶಿಕಾರಿಪುರದಲ್ಲಿ ನಾವು ಕೊಟ್ಟ ಭಿಕ್ಷೆಯಿಂದ ಗೆದ್ದಿದ್ದಾರೆ. ನಾಗರಾಜ್ ಗೌಡರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿರಲಿಲ್ಲ ಎಂಬ ಹೇಳಿಕೆ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸುವ ಮಾತನಾಡಿಲ್ಲ. ಮಾಧ್ಯಮದವರು ಈ ಬಗ್ಗೆ ವಿಜಯೇಂದ್ರ ಅವರಿಗೆ ಪ್ರಶ್ನೆ ಕೇಳಿಲ್ಲ, ಅವರೂ ಉತ್ತರಿಸಿಲ್ಲ. ನ್ಯಾಯಯುತವಾಗಿ ಗೆದ್ದು ಬರಲಿ, ಆಮೇಲೆ ವಿಜಯೇಂದ್ರ ಮಾತನಾಡಲಿ ಎಂದು ಸವಾಲು ಹಾಕಿದರು.
ಫೋರ್ಜರಿ ಸಹಿ ಮಾಡಿದ್ದಾರೆ, ಭ್ರಷ್ಟಾಚಾರ ಬಿಚ್ಚಿಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಪದೇ ಪದೇ ಹೇಳುತ್ತಾರೆ. ಸದನದಲ್ಲಿಯೂ ಈ ಮಾತು ಆಡುತ್ತಿದ್ದಂತೆ ಒಂದು ಗಂಟೆಯೂ ಸದನಲ್ಲಿ ಶಾಸಕ ವಿಜಯೇಂದ್ರ ಇರಲ್ಲ. ಹಿಂಬಾಲಿಗಿನಿಂದ ಹೋಗುತ್ತಾರೆ. ಇಂಥ ಅಧ್ಯಕ್ಷರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಕಾಂಗ್ರೆಸ್ ನವರಿಗೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರೆ ಹಬ್ಬವಿದ್ದಂತೆ. ಹಾಗಾಗಿ, ಬದಲಾವಣೆ ಆಗಬೇಕು. ಪಕ್ಷದ ಹೈಕಮಾಂಡ್ ಹಾಗೂ ಕೇಂದ್ರ ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಭ್ರಷ್ಟಾಚಾರದ ಆರೋಪ ಹೊತ್ತಿರುವ, ಅನುಭವ ಇಲ್ಲದ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗದ ವಿಜಯೇಂದ್ರ ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ
ಬಸನಗೌಡ ಪಾಟೀಲ್ ಯತ್ನಾಳ್ ರಂತ ನಾಯಕರು ಬೇಕು. ಇಂಥವರ ಅಗತ್ಯವಿದೆ. ಹಾಗಾಗಿ, ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ಇದೆ ಎಂದು ಬಿ. ಪಿ. ಹರೀಶ್ ಹೇಳಿದರು.