
ನವದೆಹಲಿ: ತನ್ನ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯು ಅಸುರಕ್ಷಿತ ಎಂದು ಘೋಷಿಸಿ ಎಫ್ಎಸ್ಎಸ್ಎಐ (FSSAI) ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಬಿಸ್ಲೆರಿ ಕಂಪನಿಯು ತಳ್ಳಿಹಾಕಿದೆ. ಸ್ವತಂತ್ರ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಬ್ರೋಮೇಟ್ ಮಟ್ಟವು ನಿಗದಿತ ಮಿತಿಯಲ್ಲೇ ಇದೆ ಎಂದು ತಿಳಿಸಿರುವ ಕಂಪನಿ, ತಮಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ ಹಾಗೂ ತಮ್ಮ ಕುಡಿಯುವ ನೀರು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ.
ನವೆಂಬರ್ 23 ರಂದು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಈ ಪ್ರಕರಣವು 2025ರ ಸೆಪ್ಟೆಂಬರ್ನಲ್ಲಿ ಗೋವಾ ಘಟಕದಲ್ಲಿ ಉತ್ಪಾದಿಸಲಾದ ಬ್ಯಾಚ್ಗೆ ಸಂಬಂಧಿಸಿದ್ದಾಗಿದೆ ಎಂದು ಬಿಸ್ಲೆರಿ ತಿಳಿಸಿದೆ. 2025ರ ಸೆಪ್ಟೆಂಬರ್ 30ರಂದು ಎಫ್ಎಸ್ಎಸ್ಎಐ 6 ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ 5 ಮಾದರಿಗಳು ಗುಣಮಟ್ಟ ಕಾಯ್ದುಕೊಂಡಿದ್ದವು.
ಒಂದರಲ್ಲಿ ಮಾತ್ರ ಬ್ರೋಮೇಟ್ ಮಿತಿ ಸ್ವಲ್ಪ ಹೆಚ್ಚಿತ್ತು. ನಂತರ ಕಂಪನಿಯು ಮೇಲ್ಮನವಿ ಸಲ್ಲಿಸಿದ್ದು, ರೆಫರಲ್ ಪ್ರಯೋಗಾಲಯವು ಮರುಪರೀಕ್ಷೆ ನಡೆಸಿದೆ. ಆದರೆ ವಿಭಿನ್ನ ಫಲಿತಾಂಶಗಳ ಕುರಿತು ಎಫ್ಎಸ್ಎಸ್ಎಐ ಅನುಮೋದಿತ ಸ್ವತಂತ್ರ ಪ್ರಯೋಗಾಲಯದಲ್ಲಿ ಮತ್ತೆ ಪರೀಕ್ಷೆ ನಡೆಸಿದಾಗ ಬ್ರೋಮೇಟ್ ಮಿತಿಯು ಸುರಕ್ಷಿತ ಮಿತಿಯಲ್ಲೇ ಇರುವುದು ದೃಢಪಟ್ಟಿದೆ ಎಂದು ಕಂಪನಿ ಹೇಳಿದೆ. ಫೆಬ್ರವರಿ 2, 2026ರಂದೇ ಈ ವರದಿಗಳನ್ನು ಸಲ್ಲಿಸಲಾಗಿದ್ದು, ತಮಗೆ ಯಾವುದೇ ನೋಟಿಸ್ ಲಭ್ಯವಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಸ್ವತಂತ್ರ ಪರೀಕ್ಷಾ ವರದಿಗಳು ಸುರಕ್ಷಿತ: ಎಫ್ಎಸ್ಎಸ್ಎಐ ಅನುಮೋದಿತ ಸ್ವತಂತ್ರ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಬಿಸ್ಲೆರಿ ನೀರಿನಲ್ಲಿ ಬ್ರೋಮೇಟ್ ಮಟ್ಟವು ನಿಗದಿತ ಮಿತಿಯೊಳಗೇ ಇದೆ ಎಂದು ಸಾಬೀತಾಗಿದೆ.
ಫೆಬ್ರವರಿ 2026ರಲ್ಲೇ ವರದಿಗಳನ್ನು ಸಲ್ಲಿಸಲಾಗಿದ್ದು, ಈವರೆಗೆ ಎಫ್ಎಸ್ಎಸ್ಎೈನಿಂದ ಯಾವುದೇ ಅಧಿಕೃತ ನೋಟಿಸ್ ಅಥವಾ ಇಮೇಲ್ ಬಂದಿಲ್ಲ ಎಂದು ಕಂಪನಿ ತಿಳಿಸಿದೆ.
ಕಟ್ಟುನಿಟ್ಟಿನ ಗುಣಮಟ್ಟ: ಹತ್ತು ಹಂತದ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಬಿಸ್ಲೆರಿ ನೀರು ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಭರವಸೆ ನೀಡಿದೆ.




