Home ಕ್ರೈಂ ನ್ಯೂಸ್ ವಿಷ ಪ್ರಾಶನದಿಂದ ಮಹಿಳೆ ಸಾವು: ಗಂಡನ ಮನೆಯ ಮುಖ್ಯ ದ್ವಾರದ ಮುಂದೆಯೇ ಶವಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ವಿಷ ಪ್ರಾಶನದಿಂದ ಮಹಿಳೆ ಸಾವು: ಗಂಡನ ಮನೆಯ ಮುಖ್ಯ ದ್ವಾರದ ಮುಂದೆಯೇ ಶವಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು!

Share
ಮಹಿಳೆ
Share

ಮುಜಫರಪುರ (ಬಿಹಾರ): ಬಿಹಾರದ ಮುಜಫರಪುರ ಜಿಲ್ಲೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ 39 ವರ್ಷದ ಮಹಿಳೆಯೊಬ್ಬರ ಮೃತದೇಹವನ್ನು, ಆಕೆಯ ಕುಟುಂಬಸ್ಥರು ಗಂಡನ ಮನೆಯ ಮುಖ್ಯ ದ್ವಾರದ ಮುಂದೆಯೇ ಚಿತೆ ಹೂಡಿ ಅಂತ್ಯಕ್ರಿಯೆ ನೆರವೇರಿಸಿರುವ  ಘಟನೆ ವರದಿಯಾಗಿದೆ.

ವಿಭಾ (39) ಮೃತ ದುರ್ದೈವಿ. ಗಂಡ ಮತ್ತು ಅತ್ತೆಯ ಮನೆಯವರೇ ವಿಷ ಪ್ರಾಶನ ಮಾಡಿ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮೃತರ ತಂದೆ ಬಚ್ಚು ಚೌಧರಿ ನೀಡಿರುವ ದೂರಿನ ಪ್ರಕಾರ, ವಿಭಾ ಅವರ ಮದುವೆ 2014ರ ನವೆಂಬರ್‌ನಲ್ಲಿ ಚಂದನ್ ಠಾಕೂರ್ ಎಂಬುವವರೊಂದಿಗೆ ನಡೆದಿತ್ತು. ಮದುವೆಯಿಂದಲೂ ವಿಭಾಳನ್ನು ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ದಂಪತಿ ನಡುವಿನ ವೈಮನಸ್ಸಿನಿಂದಾಗಿ ಮುಜಫರಪುರ ಹಾಗೂ ಅಹಮದಾಬಾದ್‌ನಲ್ಲಿ ನ್ಯಾಯಾಲಯದ ಪ್ರಕರಣಗಳೂ ದಾಖಲಾಗಿದ್ದವು. ನವೆಂಬರ್ 15ರಂದು ವಿಭಾಳಿಗೆ ವಿಷಪೂರಿತ ಆಹಾರ ನೀಡಲಾಗಿದ್ದು, ಆರೋಗ್ಯ ಗಂಭೀರವಾಗಿ ಹದಗೆಟ್ಟು ನವೆಂಬರ್ 16ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆ ಮುಂದೆಯೇ ಅಂತ್ಯಕ್ರಿಯೆ: ಮಗಳ ಸಾವಿನ ಸುದ್ದಿ ತಿಳಿದು ಅಹಮದಾಬಾದ್‌ನಿಂದ ಬಂದ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡು, ಗಂಡನ ಮನೆಯ ಹೊಸ್ತಿಲಲ್ಲೇ ಶವಕ್ಕೆ ಚಿತೆ ಹೂಡಿ ತಮ್ಮ ಆಕ್ರೋಶ ಹಾಗೂ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ದೂರು ದಾಖಲು: ಪತಿ ಚಂದನ್ ಠಾಕೂರ್, ಆತನ ಪೋಷಕರು ಹಾಗೂ ಸಹೋದರಿಯ ವಿರುದ್ಧ ಕೊಲೆ ಮತ್ತು ಕ್ರೌರ್ಯದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಲೆಮರೆಸಿಕೊಂಡ ಆರೋಪಿಗಳು: ಘಟನೆಯ ಬಳಿಕ ಚಂದನ್ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ದಂಪತಿಯ 12 ವರ್ಷದ ಮಗಳು ಅಹಮದಾಬಾದ್‌ನಲ್ಲಿ ತಾತನ ಜೊತೆ ವಾಸವಿದ್ದಾಳೆ.

Share

Recent Posts

Recent Comments

No comments to show.
Related Articles