SUDDIKSHANA KANNADA NEWS/ DAVANAGERE/ DATE:29-01-2025
ಬೆಂಗಳೂರು: ಭೂ ದಾಖಲೆಗಳ ರಕ್ಷಣೆಗೆ, ವಂವಕರಿಂದ ದುರುಪಯೋಗ ಆಗದಂತೆ, ದಾಖಲೆ ತಿದ್ದಲು ಅವಕಾಶ ಆಗದಂತೆ “ಭೂ ಸುರಕ್ಷಾ” ಪರಿಣಾಮಕಾರಿಯಾಗಿ ಜಾರಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ಈಗಾಗಲೇ 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ ಆಗಿದ್ದು, ಖದೀಮರು ತಿದ್ದಲು ಅವಕಾಶ ಆಗದಂತೆ ದಾಖಲೆಗಳಿಗೆ ಡಿಜಿಟಲ್ ಭದ್ರತೆ ಒದಗಿಸಲಾಗುವುದು ಎಂದು ಸಿಎಂಗೆ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ತಂತ್ರಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಂದಾಯ ವ್ಯವಸ್ಥೆಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗಿದೆ. ನಕ್ಷಾ ಯೋಜನೆ ಮೂಲಕ ನಗರ ಪ್ರದೇಶದಲ್ಲಿ ಡ್ರೋನ್ ಸರ್ವೆ ಮೂಲಕ ಪ್ರಾಪರ್ಟಿ ಕಾರ್ಡು ನೀಡುತ್ತಿದ್ದೇವೆ. 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಡ್ರೋನ್ ಸರ್ವೆ ಆರಂಭಿಸುವಂತೆ ಸೂಚಿಸಿದರು.
ಭೂ ಸುರಕ್ಷಾ ಯೋಜನೆ ಮೂಲಕ ಭೂ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ ಸುಮಾರು 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ ಪೂರ್ಣಗೊಳಿಸಲಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲಿ ದಾಖಲೆಗಳ ಕಂಪ್ಯೂಟರೀಕರಣ ಕಾರ್ಯ ನಡೆಯುತ್ತಿದೆ. ಹಲವು ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಂದ ಸದರಿ ಜಮೀನು ಸ್ವಾಧೀನಪಡಿಸುವ ಸಂದರ್ಭದಲ್ಲಿ ಎಕ್ಸ್ ಗ್ರೇಷಿಯಾ ನೀಡುವ ಬಗ್ಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.