Home ಕ್ರೈಂ ನ್ಯೂಸ್ ಜನಸಂಖ್ಯಾ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆಯಿಂದ ಅನ್ಯಾಯ, ದಕ್ಷಿಣ ಭಾರತದ ಧ್ವನಿ ಅಡಗಿಸುವ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಲಿ: ಸಿದ್ದರಾಮಯ್ಯ ಸವಾಲ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜನಸಂಖ್ಯಾ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆಯಿಂದ ಅನ್ಯಾಯ, ದಕ್ಷಿಣ ಭಾರತದ ಧ್ವನಿ ಅಡಗಿಸುವ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಲಿ: ಸಿದ್ದರಾಮಯ್ಯ ಸವಾಲ್!

Share
ಸಿದ್ದರಾಮಯ್ಯ
Share

ಬೆಂಗಳೂರು: ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕರ್ನಾಟಕ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳ ರಾಜಕೀಯ ಧ್ವನಿಯನ್ನು ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಹೇಗೆ ಬಲಪಡಿಸಲಿದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಉತ್ತರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಆಗ್ರಹಿಸಿದ್ದಾರೆ.

ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯು ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಮತ್ತು ಜನಸಂಖ್ಯಾ ನಿಯಂತ್ರಣ ಕಾಯ್ದುಕೊಂಡವರಿಗೆ ತೀವ್ರ ಅನ್ಯಾಯ ಎಸಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಪ್ರಸ್ತಾವನೆಯ ಪ್ರಕಾರ ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದ್ದರೆ, ಉತ್ತರ ಪ್ರದೇಶದ ಸ್ಥಾನಗಳ ಸಂಖ್ಯೆ 80ರಿಂದ 120ಕ್ಕೆ ಹೆಚ್ಚಲಿದೆ. ಇದರಿಂದ ಉಭಯ ರಾಜ್ಯಗಳ ನಡುವಿನ ಸಂಸತ್ ಸ್ಥಾನಗಳ ಅಂತರವು ಈಗಿರುವ 52ರಿಂದ ಬರೋಬ್ಬರಿ 78ಕ್ಕೆ ಹೆಚ್ಚಲಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಮತ್ತು ಪ್ರಭಾವವನ್ನು ಗಣನೀಯವಾಗಿ ಕುಗ್ಗಿಸಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಅಸ್ಮಿತೆಯ ಪ್ರಶ್ನೆ: ಕರ್ನಾಟಕದ ಪಾಲಿಗೆ ರಾಜಕೀಯ ಪ್ರಾತಿನಿಧ್ಯವೆಂದರೆ ಕೇವಲ ಸಂಸದರ ಸಂಖ್ಯೆಯಲ್ಲ, ಅದು ನಮ್ಮ ಸಾಂವಿಧಾನಿಕ ಹಕ್ಕುಗಳು, ರಾಷ್ಟ್ರೀಯ ನೀತಿ-ನಿರೂಪಣೆಯ ಮೇಲಿನ ಪ್ರಭಾವ ಹಾಗೂ ಭಾರತ ಒಕ್ಕೂಟದಲ್ಲಿ ನಮಗೆ ಸಿಗಬೇಕಾದ ನ್ಯಾಯಯುತ ಸ್ಥಾನದ ಪ್ರಶ್ನೆಯಾಗಿದೆ ಎಂದಿದ್ದಾರೆ.

ಮಹಿಳಾ ಮೀಸಲಾತಿ ವಿಳಂಬಕ್ಕೆ ವಿರೋಧ: 2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ತಂದಿತ್ತು. ಆದರೆ 2023ರಲ್ಲಿ ಮೋದಿ ಸರ್ಕಾರ ಇದನ್ನು ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿ ವಿಳಂಬ ಮಾಡುತ್ತಿದೆ. ಈಗಿರುವ ಸಂಸತ್ ಸ್ಥಾನಗಳಲ್ಲೇ ತಕ್ಷಣ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ವಪಕ್ಷ ಸಭೆಗೆ ಆಗ್ರಹ: ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆದು, ಲೋಕಸಭೆ ಸ್ಥಾನಗಳ ವಿಸ್ತರಣೆಯ ಹಿಂದಿನ ತಾರ್ಕಿಕ ಆಧಾರವನ್ನು ಬಹಿರಂಗಪಡಿಸಬೇಕು ಮತ್ತು ಪರ್ಯಾಯ ಮಾದರಿಗಳನ್ನು ದೇಶದ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಸಂಸದರಿಗೆ ಎಚ್ಚರಿಕೆ: ಕರ್ನಾಟಕದ ಬಿಜೆಪಿ ಸಂಸದರು ಮೋದಿ ಅವರ ನಿರ್ಧಾರಗಳಿಗೆ ಕುರುಡಾಗಿ ತಲೆಯಾಡಿಸುವುದನ್ನು ಬಿಟ್ಟು, ರಾಜ್ಯದ ಹಿತಾಸಕ್ತಿ ಹಾಗೂ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ರಾಜ್ಯಕ್ಕೆ ಅನ್ಯಾಯವಾಗುವ ಯಾವುದೇ ಮಾದರಿಯನ್ನು ವಿರೋಧಿಸುವ ಧೈರ್ಯ ತೋರಬೇಕು ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕ ಯಾವುದೇ ವಿಶೇಷ ಸವಲತ್ತುಗಳನ್ನಾಗಲಿ ಅಥವಾ ಬೇರೆ ರಾಜ್ಯಗಳ ಪ್ರಾತಿನಿಧ್ಯವನ್ನು ಕಡಿತಗೊಳಿಸಿ ಎಂದಾಗಲಿ ಕೇಳುತ್ತಿಲ್ಲ. ಬದಲಿಗೆ, ನಾವು ಕೇಳುತ್ತಿರುವುದು ಕೇವಲ ರಾಜಕೀಯ ನ್ಯಾಯ, ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಸಮ್ಮತ ನಡೆ ಹಾಗೂ ನಮ್ಮ ಉತ್ತಮ ಸಾಧನೆಗಳೇ ನಮಗೆ ಮುಳುವಾಗಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share

Recent Posts

Recent Comments

No comments to show.
Related Articles