
ಬೆಂಗಳೂರು: “ರಾಜ್ಯದಲ್ಲಿ ಒಟ್ಟು 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಿಸಲು ನಿರ್ಧರಿಸಿದ್ದು, ಇದಕ್ಕಾಗಿ ಸುಮಾರು 9 ಸಾವಿರ ಎಕರೆ ಜಮೀನು ಗುರುತಿಸಲಾಗಿದೆ. ನಿವೇಶನಗಳ ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ವೆಚ್ಚವನ್ನು ವಾಸ್ತವಿಕವಾಗಿ ಪರಿಶೀಲಿಸಿ ಯೋಜನೆ ರೂಪಿಸಲಾಗುವುದು” ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಹಾಗೂ ‘ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ’ಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
“ಇನ್ನು ಮುಂದೆ ಬಡವರಿಗೆ ನೀಡುವ ನಿವೇಶನಗಳ ಅಳತೆಯನ್ನು ಕನಿಷ್ಠ 30X40 ಅಡಿಗೆ ನಿಗದಿಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಹಿಂದೆ 20X30 ಅಡಿ ನಿವೇಶನ ನೀಡಲಾಗುತ್ತಿತ್ತು. ಆದರೆ ಕುಟುಂಬ ಬೆಳೆದಂತೆ ಮನೆ ಕಟ್ಟಲು ಜಾಗ ಸಾಲುವುದಿಲ್ಲ. ಮತ್ತೆ ಹೊಸ ಕೊಳಚೆ ಪ್ರದೇಶಗಳು ಸೃಷ್ಟಿಯಾಗಬಾರದು. ಬಡವರ ಮಕ್ಕಳು ಕೂಡ ಭವಿಷ್ಯದಲ್ಲಿ ಉತ್ತಮ ಮನೆ ಕಟ್ಟಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ 30X40 ಅಡಿ ನಿವೇಶನ ನೀಡಲು ನಿರ್ಧರಿಸಲಾಗಿದೆ. ಅಗತ್ಯವಿದ್ದರೆ ನಿವೇಶನಗಳ ಸಂಖ್ಯೆಯನ್ನು ಕಡಿಮೆ ಮಾಡಿಯಾದರೂ ದೊಡ್ಡ ನಿವೇಶನ ನೀಡಲಾಗುವುದು. ಮನೆ ಇಲ್ಲದ ಕುಟುಂಬಗಳಿಗೆ ನಿವೇಶನ ನೀಡುವಾಗ ಆದ್ಯತೆ ನೀಡಬೇಕು. ಈಗಾಗಲೇ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಮತ್ತೊಮ್ಮೆ ಸೌಲಭ್ಯ ಕಲ್ಪಿಸಬಾರದು” ಎಂದು ಸ್ಪಷ್ಟಪಡಿಸಿದರು.
“ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ. ಉದ್ಯೋಗ, ಶಿಕ್ಷಣ ಮತ್ತು ಉತ್ತಮ ಬದುಕಿನ ಹುಡುಕಾಟದಲ್ಲಿ ಗ್ರಾಮೀಣ ಜನರು ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಹಳ್ಳಿಗಳಲ್ಲೇ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ” ಎಂದು ಹೇಳಿದರು.
ನಗರಗಳತ್ತ ವಲಸೆ ತಡೆಯಲು ಹಳ್ಳಿಗಳ ಅಭಿವೃದ್ಧಿ
“ಮಹಾತ್ಮ ಗಾಂಧೀಜಿ ಅವರು ಭಾರತದ ಆತ್ಮ ಹಳ್ಳಿಗಳಲ್ಲಿ ಇದೆ ಎಂದಿದ್ದರು. ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ನಂಬಿಕೆ. ನಾನೂ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಗ್ರಾಮೀಣ ಜನರ ಸಮಸ್ಯೆಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅನುದಾನದ ಕೊರತೆಯಿಂದ ಎದುರಿಸುವ ಸಂಕಷ್ಟಗಳ ಅರಿವು ನನಗಿದೆ. ಹೀಗಾಗಿ ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ಇಷ್ಟು ದೊಡ್ಡ ಮೊತ್ತದ ಅನುದಾನ ಒದಗಿಸಲಾಗಿದೆ” ಎಂದು ತಿಳಿಸಿದರು.
“ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಈಗಾಗಲೇ ಶೇ.47ರಷ್ಟು ಜನಸಂಖ್ಯೆ ಸ್ಥಳಾಂತರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ.76ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ. ಉದ್ಯೋಗ, ಶಿಕ್ಷಣ ಹಾಗೂ ಉತ್ತಮ ಜೀವನದ ನಿರೀಕ್ಷೆಯಲ್ಲಿ ರೈತರ ಮಕ್ಕಳು ಊರು ತೊರೆಯುತ್ತಿದ್ದಾರೆ. ಈ ವಲಸೆ ತಡೆಯಬೇಕಾದರೆ ಹಳ್ಳಿಗಳಲ್ಲೇ ಉತ್ತಮ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು” ಎಂದರು.
ಹಳ್ಳಿಗಳ ಅಭಿವೃದ್ಧಿಯೇ ಮೊದಲ ಆದ್ಯತೆ
“ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಹಳ್ಳಿಗಳಲ್ಲಿ ಉದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಪಂಚಾಯಿತಿಗಳು ಅನಗತ್ಯ ತೊಂದರೆ ನೀಡಬಾರದು. ಕರಾವಳಿ ಮತ್ತು ಮಲೆನಾಡು ಭಾಗಗಳ ಅಭಿವೃದ್ಧಿಗೂ ವಿಶೇಷ ನೀತಿ ರೂಪಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ” ಎಂದು ಹೇಳಿದರು.
“ನಗರಗಳ ಅಭಿವೃದ್ಧಿಯಷ್ಟೇ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೂ ಮುಖ್ಯ. ಸರ್ಕಾರಿ ಕಚೇರಿಗಳು ಮತ್ತು ಪಂಚಾಯಿತಿಗಳು ಜನರ ಕಷ್ಟ ಪರಿಹರಿಸುವ ಕೇಂದ್ರಗಳಾಗಬೇಕು. ರಸ್ತೆ, ಕುಡಿಯುವ ನೀರು, ನಿವೇಶನ, ಖಾತಾ ಸೇರಿದಂತೆ ಜನರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. 16 ಸಾವಿರ ಕೋಟಿ ಗ್ರಾಮೀಣ ಜನರ ಬದುಕು ಬದಲಿಸುವುದಕ್ಕಾಗಿ. ಅಧಿಕಾರಿಗಳು ಇದನ್ನು ತಮ್ಮ ಕರ್ತವ್ಯವೆಂದು ಭಾವಿಸಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
- 15 lakh sites distribution Karnataka
- 15 ಲಕ್ಷ ನಿವೇಶನ ಹಂಚಿಕೆ
- 30x40 sites for poor
- 30X40 ಅಡಿ ನಿವೇಶನ
- Bengaluru News
- DK Shivakumar
- Karnataka government housing scheme
- Karnataka rural development scheme
- Mukhyamantri Grameena Raste Samparka Yojana
- ಕರ್ನಾಟಕ ಸರ್ಕಾರ
- ಗ್ರಾಮೀಣಾಭಿವೃದ್ಧಿ ಅನುದಾನ
- ಡಿ. ಕೆ. ಶಿವಕುಮಾರ್
- ಬೆಂಗಳೂರು ಸುದ್ದಿ
- ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ
- ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ




