SUDDIKSHANA KANNADA NEWS/ DAVANAGERE/DATE:16_08_2025
ದಾವಣಗೆರೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ನೆಲೆಸಿರುವ ಶ್ರದ್ಧಾ ಭಕ್ತಿ ತಾಣದ ಬಗ್ಗೆ ಅಪಪ್ರಚಾರ ನಡೆಸುತ್ತಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 20ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದದವರು ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದಾರೆ.
READ ALSO THIS STORY: EXCLUSIVE: ಶಿವಪ್ಪನಾಯಕ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಗುಜರಿ ಅಂಗಡಿ, ಚಾರ್ಜರ್, ಬಲ್ಬ್ ಗಳು ಢಮಾರ್!
ಅಂದು ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ನಗರದ ಜಯದೇವ ವೃತ್ತದಿಂದ ಗಾಂಧಿ ವೃತ್ತ ತಲುಪಿ ಅಲ್ಲಿಂದ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಜಾಥಾ ನಡೆಯಲಿದ್ದು, ಸಾವಿರಾರು ಭಕ್ತರು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಒಂದು. ಸರಿ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರ ‘ದಕ್ಷಿಣ ಕಾಶಿ’ ಎಂದೇ ನಾಮಾಂಕಿತವಾಗಿದೆ. ರಾಜ್ಯದಲ್ಲಷ್ಟೇ ಅಲ್ಲದೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹೀಗೆ ದೇಶದ ಬೇರೆ ಬೇರೆ ಕಡೆಗಳಿಂದ ನಿತ್ಯ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಸುಮಾರು 50 ಸಾವಿರದಿಂದ 1 ಲಕ್ಷ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್ ಎಂ.ಡಿ., ಸಂತೋಷ್ ಶೆಟ್ಟಿ, ಜಯಂತ ಟಿ., ಅಜಯ್ ಅಂಚನ್ ಮತ್ತು ಅವನ ಸಹಚರರು ಸೇರಿಕೊಂಡು ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಪೂಜ್ಯನೀಯ ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ಹೆಸರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ವೀಡಿಯೋಗಳ ತುಣುಕುಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ಯಾವುದೇ ದಾಖಲೆಗಳಿಲ್ಲದೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದರಿಂದ ಶ್ರೀ ಕ್ಷೇತ್ರದ ಕೋಟ್ಯಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದರಿಂದಾಗಿ ಈಗಾಗಲೇ ಸಮಾಜದಲ್ಲಿ ಎರಡು ಬಣಗಳು ನಿರ್ಮಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯು ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಭಂಗಕ್ಕೆ ಕಾರಣವಾಗಬಹುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅನಾಮಿಕ ವ್ಯಕ್ತಿಯೋರ್ವ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರಕಾರವು ‘ವಿಶೇಷ ತನಿಖಾ ತಂಡ’ವನ್ನು ರಚಿಸಿ ತನಿಖೆ ನಡೆಸುತ್ತಿರುವುದನ್ನು ಶ್ರೀ ಕ್ಷೇತ್ರದ ಭಕ್ತವೃಂದದವರಾದ ನಾವೆಲ್ಲರೂ ಗೌರವದಿಂದ ಸ್ವಾಗತಿಸುತ್ತೇವೆ. ಆದರೆ
ಇದೀಗ ಅನಾಮಿಕ ದೂರುದಾರನನ್ನು ಬಳಸಿಕೊಂಡು ಶ್ರೀ ಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ತಮ್ಮ ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಮಾಹಿತಿಗಳನ್ನು ಬಿತ್ತರಿಸಿ ಭಕ್ತರಲ್ಲಿ
ಗೊಂದಲವನ್ನು ನಿರ್ಮಿಸುತ್ತಿದ್ದಾರೆ ಎಂದು ದೂರಿದರು.
ಸೌಜನ್ಯಾಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ದಾಳಿಗೆ ಹೊರಟ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣವರ್, ಸಮೀರ್ ಎಂ.ಡಿ., ಸಂತೋಷ್ ಶೆಟ್ಟಿ, ಜಯಂತ ಟಿ. ಅಜಯ್ ಅಂಚನ್ ಇವರುಗಳು ಷಡ್ಯಂತ್ರ ಹಾಗೂ ಅಪಪ್ರಚಾರ ಮಾಡುತ್ತಿರುವುದರ ಹಿನ್ನೆಲೆ ಏನು? ಸುಳ್ಳು ಆರೋಪ ಮಾಡಲು ಪ್ರಚೋದಿಸುತ್ತಿರುವವರು ಯಾರು? ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ? ಎಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕಾಗಿದೆ. ತಮ್ಮ ಮೊಬೈಲ್‌ನಲ್ಲಿ ಸಾಕ್ಷಿಗಳಿವೆ ಎಂದು ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಘಂಟಾಘೋಷವಾಗಿ ಭಾಷಣ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂ.ಡಿ., ಜಯಂತ್ ಟಿ., ಸಂತೋಷ್ ಶೆಟ್ಟಿ, ಅಜಯ್ ಅಂಚನ್ ಇವರುಗಳನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈಗಿರುವ ಎಸ್‌ಐಟಿ ತಂಡ ಅಥವಾ ಇನ್ನೊಂದು ತನಿಖಾ ತಂಡವನ್ನು ರಚಿಸಿ ತಕ್ಷಣ ತನಿಖೆಯನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳು ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ವೃಂದದವರು ಜಾಥಾ ನಡೆಸಿದ ಬಳಿಕ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ದೂರು ನೀಡಲಿದ್ದೇವೆ. ಅಲ್ಲದೆ ಕ್ಷೇತ್ರದ ಗೌರವಕ್ಕೆ ಧಕ್ಕೆ ಬಾರದ ಹಾಗೆ ಕ್ಷೇತ್ರದ ರಕ್ಷಣೆಗೆ ನಾವು ಸದಾ
ಸಿದ್ಧರಿದ್ದೇವೆ ಎಂದು ಘೋಷಸಿದರು.
ಈ ಜನಾಗ್ರಹ ಜಾಥಾದಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲ ರೈತ ಸಂಘಟನೆಗಳು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತ್ತು ಸಮಸ್ತ ಕ್ಷೇತ್ರದ ಭಕ್ತರು ಭಾಗವಹಿಸಬೇಕೆಂದು ಭಕ್ತ ವೃಂದದವರು ಕೋರಿದರು.
ಗೋಷ್ಠಿಯಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಣಬೇರು ಮಂಜುನಾಥ್, ಜಯಪ್ರಕಾಶ್ ಮಾಗಿ, ಸೋಗಿ ಶಾಂತಕುಮಾರ್, ಜಿಗಳಿ ಪ್ರಕಾಶ್, ಗುರು, ಮಂಜುನಾಥ್ ಪಾಟೀಲ್ ಮತ್ತಿತರರು ಹಾಜರಿದ್ದರು.