Home ದಾವಣಗೆರೆ ಸೆಪ್ಟೆಂಬರ್ 28 ರಿಂದ 30 ರವರೆಗೆ ಬ್ಯಾಂಕ್ ಮುಷ್ಕರ: 5 ದಿನಗಳ ಬ್ಯಾಂಕಿಂಗ್ ಜಾರಿಗೆ ಆಗ್ರಹಿಸಿ 8 ಲಕ್ಷ ನೌಕರರ ಹೋರಾಟ, ಮುಷ್ಕರದ ಬಗ್ಗೆ ಕೆ.ರಾಘವೇಂದ್ರ ನಾಯರಿ ಮಾಹಿತಿ!
ದಾವಣಗೆರೆಬೆಂಗಳೂರು

ಸೆಪ್ಟೆಂಬರ್ 28 ರಿಂದ 30 ರವರೆಗೆ ಬ್ಯಾಂಕ್ ಮುಷ್ಕರ: 5 ದಿನಗಳ ಬ್ಯಾಂಕಿಂಗ್ ಜಾರಿಗೆ ಆಗ್ರಹಿಸಿ 8 ಲಕ್ಷ ನೌಕರರ ಹೋರಾಟ, ಮುಷ್ಕರದ ಬಗ್ಗೆ ಕೆ.ರಾಘವೇಂದ್ರ ನಾಯರಿ ಮಾಹಿತಿ!

Share
ಬ್ಯಾಂಕ್
Share

ದಾವಣಗೆರೆ: ಬ್ಯಾಂಕ್ ನೌಕರರ ದಶಕಗಳ ಬೇಡಿಕೆಯಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಹಾಗೂ ದೋಷ, ತಾರತಮ್ಯಪೂರಿತ ಪ್ರೋತ್ಸಾಹ ಧನ ಯೋಜನೆಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯ ಕರೆಯ ಮೇರೆಗೆ ಸೆಪ್ಟೆಂಬರ್ 28, 29, 30 ಮೂರು ದಿನಗಳ ಕಾಲ ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಯಲಿದೆ ಎಂದು ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಮತ್ತು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.

ಬ್ಯಾಂಕ್ ಉದ್ಯೋಗಿಗಳ 5 ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೆ ಬರಬೇಕು ಎನ್ನುವ ಬೇಡಿಕೆಯು ಇಂದು ನಿನ್ನೆಯದಲ್ಲ. 01.11.2012 – 31.10.2017 ರ ಅವಧಿಯ 10 ನೇ ದ್ವಿಪಕ್ಷೀಯ ಒಪ್ಪಂದದ ಮಾತುಕತೆಯ ಸಂದರ್ಭದಲ್ಲಿ ಈ ಬೇಡಿಕೆಯ ಕುರಿತಾಗಿ ಕೂಲಂಕುಷವಾದ ಚರ್ಚೆ ನಡೆದು ಅಂತಿಮವಾಗಿ ತಿಂಗಳಲ್ಲಿ ಎರಡನೇ‌ ಮತ್ತು ನಾಲ್ಕನೇ ಶನಿವಾರ ಪೂರ್ಣಪ್ರಮಾಣದ ರಜೆ ಹಾಗೂ ಉಳಿದ ಶನಿವಾರಗಳಂದು ಅರ್ಧ ದಿನದ ಕೆಲಸದ ಬದಲಾಗಿ ಪೂರ್ಣಪ್ರಮಾಣದ ಕೆಲಸದ ದಿನವನ್ನಾಗಿ ಘೋಷಣೆ ಮಾಡಿ ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದ 5 ದಿನಗಳ ಬ್ಯಾಂಕಿಂಗ್ ಪದ್ಧತಿಯ ಬೇಡಿಕೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಲಾಗಿತ್ತು.

ಅದಾಗಿ ದಶಕವೇ ಕಳೆದಿದೆ. ನಂತರದಲ್ಲಿ 01.11.2017 – 31.10.2022 ರ ಅವಧಿಯ 11 ದ್ವಿಪಕ್ಷೀಯ ಒಪ್ಪಂದದ ಮಾತುಕತೆಯ ಸಂದರ್ಭದಲ್ಲಿಯೂ ಈ ಬೇಡಿಕೆಯನ್ನು ಪರಿಗಣಿಸಲಾಗಿರಲಿಲ್ಲ.

ತದನಂತರದಲ್ಲಿ 01.11.2022 – 31.10.2027 ರ ಅವಧಿಯ 12 ದ್ವಿಪಕ್ಷೀಯ ಒಪ್ಪಂದದ ಅವಧಿಯ ಮಾತುಕತೆಯ ಸಂದರ್ಭದಲ್ಲಿ ಸುದೀರ್ಘವಾದ ಚರ್ಚೆಗೆ ಒಳಪಟ್ಟು ವಾರದ 5 ದಿನಗಳಲ್ಲಿ ಬ್ಯಾಂಕಿನ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಳ ಮಾಡಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರದ ಪ್ರತಿನಿಧಿ ಸಂಸ್ಥೆ ‘ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್’ ಹಾಗೂ ‘ಬ್ಯಾಂಕ್ ಕಾರ್ಮಿಕ ಸಂಘಗಳ‌ ಸಂಯುಕ್ತ ವೇದಿಕೆ’ಯ ನಡುವೆ ದಿನಾಂಕ : 08.03.2024 ರಂದು ಒಪ್ಪಂದವಾಗಿ ಅದರ ಅನುಮೋದನೆಗಾಗಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಗೆ ಕಳುಹಿಸಲಾಗಿತ್ತು.

ಆದರೆ ಒಪ್ಪಂದವಾಗಿ ಎರಡೂವರೆ ವರ್ಷಗಳು ಕಳೆದರೂ, ಈ ಕುರಿತಾಗಿ ಹತ್ತಾರು ಸಭೆಗಳು ನಡೆದಿದ್ದರೂ, ಬೇಡಿಕೆ ಈಡೇರಿಕೆಗಾಗಿ ಹಲವಾರು ಪ್ರತಿಭಟನೆಗಳು, ಎರಡು ಹಂತಗಳಲ್ಲಿ ಮುಷ್ಕರ ನಡೆದಿದ್ದರೂ ಸಹ ಅನಗತ್ಯವಾಗಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಬೇಡಿಕೆಯ ಈಡೇರಿಕೆಗಾಗಿ ಈ ಹಿಂದೆ 2025 ರ ಸಾಲಿನಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟಂತಹ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಉನ್ನತಾಧಿಕಾರಿಗಳು ಅತೀ ಶೀಘ್ರವಾಗಿ ಬ್ಯಾಂಕ್ ಉದ್ಯೋಗಿಗಳ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿತ್ತು.

ಅದಾಗಿ ಒಂದೂವರೆ ವರ್ಷವೇ ಕಳೆದಿದೆ. ಆನಂತರದಲ್ಲಿ 27.01.2026 ಮತ್ತು 11.09.2026 ರಂದು ಎರಡು ಹಂತಗಳಲ್ಲಿ ಒಂದೊಂದು ದಿನದ ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಸಿದ್ದರೂ ಬೇಡಿಕೆ‌ ಮಾತ್ರ ಇನ್ನೂ ಈಡೇರಿಲ್ಲ. ಒಪ್ಪಂದವು ಕಾಗದದ ಒಪ್ಪಂದವಾಗಿಯೇ ಉಳಿದಿದೆ. ಈಗ ಬ್ಯಾಂಕ್ ಉದ್ಯೋಗಿಗಳ ಸಹನೆಯ ಕಟ್ಟೆ ಒಡೆದಿದೆ‌. ಮಾತುಕತೆ, ಪ್ರತಿಭಟನೆ ಹೀಗೆ ಎಲ್ಲ ಹಂತಗಳ ಬಾಗಿಲು ಮುಚ್ಚಿದ ಮೇಲೆ ಈಗ ಮುಷ್ಕರದ ಹಾದಿ ಅನಿವಾರ್ಯವಾಗಿದೆ. ಪ್ರಸ್ತುತ ಬ್ಯಾಂಕ್ ಉದ್ಯೋಗಿಗಳು ಅತೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೆಚ್ಚುತ್ತಿರುವ ವ್ಯವಹಾರಕ್ಕೆ ತಕ್ಕನಾಗಿ ಉದ್ಯೋಗಿಗಳ ನೇಮಕಾತಿ ಆಗುತ್ತಿಲ್ಲ. ವ್ಯವಹಾರದ ಪ್ರಮಾಣ ದ್ವಿಗುಣಗೊಂಡಿದ್ದರೆ, ಉದ್ಯೋಗಿಗಳ ಸಂಖ್ಯೆ ಪ್ರತಿಶತ 50 ಕ್ಕಿಂತ ಹೆಚ್ಚು ಕುಸಿದಿದೆ. ವಾರದ ದಿನಗಳಲ್ಲಿ ಅಧಿಕಾರಿಗಳು ರಾತ್ರಿ ಹತ್ತಾದರೂ ಮನೆಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬಂದರೆ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಾಗುವುದರ ಜೊತೆಗೆ ಬ್ಯಾಂಕ್ ಕೆಲಸದೊಂದಿಗೆ ವೈಯಕ್ತಿಕ ಜೀವನವನ್ನೂ ಸೂಕ್ತವಾಗಿ ಸಂಬಾಳಿಸಲು ಸಾಧ್ಯವಾಗುತ್ತದೆ.

ಇದಲ್ಲದೇ ಕೇಂದ್ರ ಸರಕಾರದ ಅಧೀನದ ಇಲಾಖೆಗಳು, ಜೀವ ವಿಮೆ, ಸಾಮಾನ್ಯ ವಿಮೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಬಿ, ನಬಾರ್ಡ್ ಮೊದಲಾದ ಇಲಾಖೆಗಳು ವಾರಕ್ಕೆ ಐದು ದಿನ ಮಾತ್ರವೇ ಕೆಲಸ ಮಾಡುತ್ತಿವೆ‌. ಜಾಗತಿಕ ಮಟ್ಟದಲ್ಲೂ ಬ್ಯಾಂಕುಗಳು 5 ದಿನ ಕೆಲಸ ಮಾಡುವ ವ್ಯವಸ್ಥೆ ಇದೆ. ಹೀಗಿದ್ದರೂ ಸಹ ಕೇಂದ್ರ ಹಣಕಾಸು ಇಲಾಖೆ ಅನಗತ್ಯವಾಗಿ ಕಾಲಹರಣ ಮಾಡಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸೋತಿದೆ.

ಆದ್ದರಿಂದ ಅನಿವಾರ್ಯವಾಗಿ ಬರುವ ಸೆಪ್ಟೆಂಬರ್ 28, 29, 30 ರಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರ ನಡೆಯುತ್ತಿದೆ. ಸುಮಾರು 8 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡು, ಬೀದಿಗಿಳಿದು ಸರಕಾರದ ವಿಳಂಬ ಧೋರಣೆಯ ವಿರುದ್ಧ ಪ್ರತಿಭಟಿಸಲಿದ್ದಾರೆ.

ಈ ಬ್ಯಾಂಕ್ ಮುಷ್ಕರವು ಖಂಡಿತವಾಗಿ ಸಾರ್ವಜನಿಕರಿಗೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದರೆ ಈ ಸಮಸ್ಯೆಗೆ ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ, ಕೇಂದ್ರ ಹಣಕಾಸು ಸೇವೆಗಳ ಇಲಾಖೆಯೇ ನೇರವಾಗಿ ಹೊಣೆಯನ್ನು ಹೊತ್ತುಕೊಳ್ಳಬೇಕು. ಸರಕಾರವು ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಬದಲಾಗಿ ಮುಷ್ಕರವನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತದೆ. ಇದು ಸರ್ವತಾ ಖಂಡನೀಯ ಎಂದು ಬ್ಯಾಂಕ್ ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *