SUDDIKSHANA KANNADA NEWS/ DAVANAGERE/ DATE:17-03-2025
ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಮಾ.18ರ ಮಂಗಳವಾರದಿಂದ ನಡೆಯಲಿರುವ ಊರಮ್ಮ ದೇವಿಯ ಜಾತ್ರೆಯಲ್ಲಿ, ಜಾತ್ರೆ ಹೆಸರಿನಲ್ಲಿ ಪ್ರಾಣಿ ಬಲಿ ಮಾಡಬಾರದೆಂದು, ಅದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ನಗರ ಪೊಲೀಸ್ಠಾಣೆ ಅಧಿಕಾರಿಗಳು ಅವಕಾಶ ನೀಡಬಾರದೆಂದು ವಿಶ್ವ ಪ್ರಾಣಿಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಮಾ 18 ರಿಂದ ಮಾ.22 ರ ವರೆಗೂ ಗ್ರಾಮದೇವತೆ ಊರಮ್ಮಜಾತ್ರೆ ನಡೆಯುವುದರಿಂದ ಈ ಜಾತ್ರೆಗೆ ಜಿಲ್ಲೆ ಸೇರಿದಂತೆ, ಅಕ್ಕ-ಪಕ್ಕದ ಜಿಲ್ಲೆಗಳಿಂದ, ರಾಜ್ಯದ ನಾನಾ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಪೂಜಾಹಾಗೂ ಧಾರ್ಮಿಕ ಸೇವಾ ಕಾರ್ಯಗಳನ್ನು ಸಲ್ಲಿಸುತ್ತಾರೆ.
ಇದೇ ಸಂದರ್ಭದಲ್ಲಿ ಹಲವು ಭಕ್ತರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಆಡು,ಕುರಿ, ಕೋಳಿ,ಕೋಣ ಮುಂತಾದ ಪ್ರಾಣಿಗಳ ಬಲಿ ನೀಡುತ್ತಾರೆ. ಆದರೆ,ಕರ್ನಾಟಕ ಪ್ರತಿಬಂದಕ ಅಧಿನಿಯಮ 1959 ಮತ್ತು 1963 ತಿದ್ದುಪಡಿಕಾಯ್ದೆ, 1975 ಪ್ರಕಾರ ಪ್ರಾಣಿ ಬಲಿ ಮಾಡುವುದು ಅಪರಾಧವಾಗುತ್ತದೆ. ಹೈಕೋರ್ಟ್ ಆದೇಶಗಳ ಅಡಿಯಲ್ಲಿ ಸಂಪೂರ್ಣವಾಗಿ ಪ್ರಾಣಿ ಬಲ ನೀಡುವುದನ್ನು ತಡೆಯಬೇಕೆಂದು ಅವರು ಕೋರಿದ್ದಾರೆ.