Home ದಾವಣಗೆರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮನೆಗೆ ಗ್ಯಾರಂಟಿ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಸಂಭ್ರಮಾಚರಣೆ: ಇಂಥ ಸರ್ಕಾರ ಬೇಕಾ ಎಂದು ಪ್ರಶ್ನಿಸಿದ ಬಿ. ವೈ. ವಿಜಯೇಂದ್ರ!
ದಾವಣಗೆರೆನವದೆಹಲಿಬೆಂಗಳೂರು

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮನೆಗೆ ಗ್ಯಾರಂಟಿ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಸಂಭ್ರಮಾಚರಣೆ: ಇಂಥ ಸರ್ಕಾರ ಬೇಕಾ ಎಂದು ಪ್ರಶ್ನಿಸಿದ ಬಿ. ವೈ. ವಿಜಯೇಂದ್ರ!

Share
ಸರ್ಕಾರ
Share

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹187 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ 10 ದಿನಗಳ ಐತಿಹಾಸಿಕ ‘ಬಳ್ಳಾರಿ ಚಲೋ’ ಪಾದಯಾತ್ರೆ ಗುರುವಾರ ಬಳ್ಳಾರಿಯ ಬೃಹತ್ ಬಹಿರಂಗ ಸಮಾವೇಶದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಲಿಂಗಸುಗೂರಿನಿಂದ ಆರಂಭಗೊಂಡಿದ್ದ ಈ ಪಾದಯಾತ್ರೆಯು ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ 9 ಪ್ರಮುಖ ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದುಬಂದು ಬಳ್ಳಾರಿಯಲ್ಲಿ ಬೃಹತ್ ಜನಾಂದೋಲನವಾಗಿ ಮಾರ್ಪಟ್ಟಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅಬ್ಬರದ ಭಾಷಣ ಮಾಡಿದರು. ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ‘ವಂದೇ ಮಾತರಂ’ ಗೀತೆಯನ್ನು ಕೇವಲ ಎರಡು ಸಾಲುಗಳಿಗೆ ಸೀಮಿತಗೊಳಿಸುವಂತೆ ಆದೇಶಿಸಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ರಾಷ್ಟ್ರೀಯ ಭಾವನೆಗಳಿಗೆ ಗೌರವ ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುವ ಸಂಕಲ್ಪ: ವಿಜಯೇಂದ್ರ

ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ನೂರು ದಿನಗಳ ಸಂಭ್ರಮಾಚರಣೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಬಿಜೆಪಿ ಹತ್ತು ದಿನಗಳ ಕಾಲ ಜನರ ನಡುವೆ ಪಾದಯಾತ್ರೆ ನಡೆಸಿದೆ. ಸರ್ಕಾರದ ಸಂಭ್ರಮಾಚರಣೆಯ ಬದಲು ಜನರ ಸಮಸ್ಯೆಗಳನ್ನು ಆಲಿಸುವುದು ಮುಖ್ಯ. ಪಾದಯಾತ್ರೆಯ ಸಂದರ್ಭದಲ್ಲಿ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಹಾಗೂ ವಿವಿಧ ಸಮುದಾಯಗಳ ಜನರು ತಮ್ಮ ನೋವು-ನಲಿವುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಜನರ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳಿಗೆ ಪರಿಹಾರ ಕಂಡುಕೊಳ್ಳುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುವ ಸಂಕಲ್ಪವನ್ನು ರಾಜ್ಯದ ಜನತೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

“ವಾಲ್ಮೀಕಿ ನಿಗಮದ ಲೂಟಿ ಹಣ ವಾಪಸ್ ನೀಡಿ”

ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಗರ್ಜಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, “ವಾಲ್ಮೀಕಿ ನಿಗಮದಲ್ಲಿ ನಡೆದ ₹187 ಕೋಟಿ ಹಗರಣದ ಹಣವನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆದು ದಲಿತ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕಾಗಿಯೇ ವಿನಿಯೋಗಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಲೂಟಿಯಾದ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ಸರ್ಕಾರ ತಕ್ಷಣ ಅಧಿಕಾರ ತೊರೆದು ಮನೆಗೆ ಹೋಗಲಿ” ಎಂದು ಸವಾಲೆಸೆದರು.

ಪ್ರತಿ ಕ್ಷೇತ್ರಕ್ಕೆ ₹200 ಕೋಟಿ ರಸ್ತೆ ಅಭಿವೃದ್ಧಿ ಅನುದಾನಕ್ಕೆ ಆಗ್ರಹ

ರಾಜ್ಯಾದ್ಯಂತ ತೀವ್ರವಾಗಿ ಹದಗೆಟ್ಟಿರುವ ಮೂಲಸೌಕರ್ಯಗಳ ಕುರಿತು ಮಾತನಾಡಿದ ವಿಜಯೇಂದ್ರ, “ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಗ್ರಾಮೀಣ ಮತ್ತು ನಗರ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ಪ್ರತಿ ಕ್ಷೇತ್ರಕ್ಕೆ ಕನಿಷ್ಠ ₹200 ಕೋಟಿ ರಸ್ತೆ ಅಭಿವೃದ್ಧಿ ಅನುದಾನ ಒದಗಿಸಬೇಕು. ಸರ್ಕಾರ ತನ್ನ ಆಡಳಿತ, ಹಣಕಾಸು ಸ್ಥಿತಿ ಮತ್ತು ಯೋಜನೆಗಳಿಗೆ ವೆಚ್ಚ ಮಾಡಲಾದ ಅನುದಾನದ ಸಂಪೂರ್ಣ ಮಾಹಿತಿಯನ್ನೊಳಗೊಂಡ ಶ್ವೇತಪತ್ರ ಹೊರಡಿಸಬೇಕು” ಎಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ ಹಾಗೂ ರೈತರ ಗೋಳು

ನವಲಿ ಜಲಾಶಯ ಯೋಜನೆ: ಸರ್ಕಾರ ಬಿಡದಿ ಟೌನ್‌ಶಿಪ್ ಹಾಗೂ ಬೆಂಗಳೂರಿನ ಸುರಂಗ ಮಾರ್ಗದಂತಹ ಕೋಟ್ಯಂತರ ರೂಪಾಯಿ ಯೋಜನೆಗಳ ಕಡೆ ಗಮನ ಹರಿಸುತ್ತಿದೆಯೇ ಹೊರತು, ಕಲ್ಯಾಣ ಕರ್ನಾಟಕದ ರೈತರ ಜೀವನದಿಯಾದ ನವಲಿ ಸಮಾನಾಂತರ ಜಲಾಶಯ ಯೋಜನೆಗೆ ತುರ್ತು ಆದ್ಯತೆ ನೀಡುತ್ತಿಲ್ಲ.

ಅಡಿಕೆ ಬೆಳೆಗಾರರ ರಕ್ಷಣೆ: ಗುಟ್ಕಾ ನಿಷೇಧದ ಹೆಸರಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಲಕ್ಷಾಂತರ ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಬೇಕು.

ಬರ ಪರಿಹಾರ: ರಾಜ್ಯ ಸರ್ಕಾರ ತನ್ನ ಆಡಳಿತಾತ್ಮಕ ಜವಾಬ್ದಾರಿಯಿಂದ ನುಣುಚಿಕೊಂಡು ಕೇವಲ ಕೇಂದ್ರದತ್ತ ಬೆರಳು ತೋರಿಸುವುದನ್ನು ಬಿಟ್ಟು, ರೈತರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸಬೇಕು.

ಸೆಪ್ಟೆಂಬರ್ 17ರಿಂದ ‘ಸೇವಾ ಸಂಕಲ್ಪ’

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯ ಅಂಗವಾಗಿ ಸೆಪ್ಟೆಂಬರ್ 17ರಿಂದ ತಿಂಗಳ ಕಾಲ ರಾಜ್ಯಾದ್ಯಂತ ‘ಸೇವಾ ಸಂಕಲ್ಪ’ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದು ಬಿ.ವೈ. ವಿಜಯೇಂದ್ರ ಪ್ರಕಟಿಸಿದರು. ‘ಬಳ್ಳಾರಿ ಚಲೋ’ ಹೋರಾಟ ಇಲ್ಲಗೇ ಮುಗಿಯುವುದಿಲ್ಲ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles