ಅಹ್ವಾ (ಗುಜರಾತ್): 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ 4×400 ಮೀಟರ್ ರಿಲೇ ತಂಡದ ಪರವಾಗಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಹೆಸರಾಂತ ಸ್ಪ್ರಿಂಟರ್ ಹಾಗೂ ಅಥ್ಲೀಟ್ ಸರಿತಾ ಗಾಯಕ್ವಾಡ್ ಅವರು ಬರೋಬ್ಬರಿ ರೂ. 69,10,059 ಗಳನ್ನು ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ.
ಗುಜರಾತ್‌ನ ತಪೀ ಜಿಲ್ಲೆಯ ವ್ಯಾರಾ ಪಟ್ಟಣದ ನಿವಾಸಿ ನಿತಿನ್ ಭಾರತಿ ಎಂಬ ವ್ಯಕ್ತಿ ಮರಳು ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ. 4ರಷ್ಟು ಭಾರಿ ಲಾಭಾಂಶ ನೀಡುವುದಾಗಿ ಆಮಿಷ ಒಡ್ಡಿ ಈ ವಂಚನೆ ಎಸಗಿದ್ದಾನೆ.
2024ರಲ್ಲಿ ಗ್ರಾಮ ಪಂಚಾಯತ್ ಸರಪಂಚ್ ಜಿತುಭಾಯ್ ಎಂಬುವವರ ಪರಿಚಯದ ಮೂಲಕ ನಿತಿನ್ ಭಾರತಿ ಸರಿತಾ ಅವರಿಗೆ ಪರಿಚಯವಾಗಿದ್ದನು. ತಾನು ವ್ಯಾರಾದಲ್ಲಿ ಬೃಹತ್ ಪ್ರಮಾಣದ ಮರಳು ವ್ಯವಹಾರ ನಡೆಸುತ್ತಿದ್ದು, ಮುಂಬೈಗೆ ಸಾಮಗ್ರಿಗಳನ್ನು ಸಾಗಿಸುವುದಾಗಿ ಹೇಳಿ ನಂಬಿಸಿದ್ದನು.
ಈ ಮಾತನ್ನು ನಂಬಿ ಸರಿತಾ ಹಂತ ಹಂತವಾಗಿ ಸುಮಾರು 69 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು. ಆದರೆ ಒಂದು ವರ್ಷ ಕಳೆದರೂ ಯಾವುದೇ ಲಾಭಾಂಶವನ್ನಾಗಲೀ ಅಥವಾ ಮೂಲ ಹೂಡಿಕೆಯ ಹಣವನ್ನಾಗಲೀ ಮರಳಿಸದೆ, ವ್ಹಾಟ್ಸ್‌ಆ್ಯಪ್‌ನಲ್ಲಿ 30 ಲಕ್ಷ ರೂ.ಗಳ ನಕಲಿ ಚೆಕ್ ಕಳುಹಿಸಿ ವಂಚಿಸಿದ್ದಾನೆ. ಕಳೆದ ಎರಡು ತಿಂಗಳಿಂದ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿರುವ ಆರೋಪಿ ವಿರುದ್ಧ ಡಾಂಗ್ ಜಿಲ್ಲೆಯ ಅಹ್ವಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 316(5) ಮತ್ತು 318(4) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
69 ಲಕ್ಷ ರೂ. ವಂಚನೆ: ಏಷ್ಯನ್ ಗೇಮ್ಸ್ ಗೋಲ್ಡ್ ಮೆಡಲಿಸ್ಟ್ ಸರಿತಾ ಗಾಯಕ್ವಾಡ್ ಮರಳು ವ್ಯಾಪಾರದಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಆರೋಪಿಯ ತಂತ್ರ: ಪ್ರತಿ ತಿಂಗಳು ಶೇ. 4ರಷ್ಟು ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದ ನಿತಿನ್ ಭಾರತಿ, ನಂತರ ಹಣವನ್ನೂ ಕೊಡದೆ ವ್ಹಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಚೆಕ್ ಕಳುಹಿಸಿ ವಂಚಿಸಿದ್ದಾನೆ.
ಪೊಲೀಸ್ ತನಿಖೆ ಆರಂಭ: ಅಥ್ಲೀಟ್ ಸರಿತಾ ಅವರ ದೂರಿನ ಮೇರೆಗೆ ಅಹ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕ್ರೀಡಾ ಲೋಕದಲ್ಲಿ ಆಘಾತ: ದೇಶಕ್ಕಾಗಿ ಚಿನ್ನದ ಪದಕ ಗೆದ್ದ ಹೆಮ್ಮೆಯ ಕ್ರೀಡಾಪಟುವಿಗೆ ವಂಚನೆಯಾಗಿರುವುದು ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ದೇಶದ ಕೀರ್ತಿ ಪತಾಕೆ ಹಾರಿಸಿದ ಪ್ರತಿಭಾವಂತ ಕ್ರೀಡಾಪಟುವಿಗೆ ಆಗಿರುವ ಈ ಅನ್ಯಾಯದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕವಾಗಿ ಒತ್ತಾಯಿಸಲಾಗಿದೆ.





Leave a comment