ನವದೆಹಲಿ: ಯಶಸ್ಸಿನ ಹಿಂದಿರುವ ಕಷ್ಟಗಳು ಮತ್ತು ತ್ಯಾಗಗಳು ಯಾರಿಗೂ ಸುಲಭವಾಗಿ ಕಾಣಿಸುವುದಿಲ್ಲ. ಆದರೆ, ಸರಣಿ ಸೋಲುಗಳು, ತೀವ್ರ ಅನಾರೋಗ್ಯ, ವೈಯಕ್ತಿಕ ನಷ್ಟಗಳ ನಡುವೆಯೂ ಫೀನಿಕ್ಸ್‌ನಂತೆ ಎದ್ದು ಬಂದು ಸಾಧನೆಗೈದ ಅಶ್ವಿನಿ ಕುಮಾರ್ ಅವರ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ. 40ನೇ ವಯಸ್ಸಿನಲ್ಲಿ 300 ಕೋಟಿ ರೂಪಾಯಿ ಟರ್ನೋವರ್ ಹೊಂದಿದ್ದ ಕಂಪನಿಯ ವೈಸ್ ಪ್ರೆಸಿಡೆಂಟ್ (VP) ಹುದ್ದೆ ಮತ್ತು ಐಷಾರಾಮಿ ಜೀವನವನ್ನು ತ್ಯಜಿಸಿ, ತಮ್ಮದೇ ಆದ ಸ್ವಂತ ಸ್ಟಾರ್ಟ್‌ಅಪ್ ಆರಂಭಿಸಿದ ಅಶ್ವಿನಿ ಕುಮಾರ್ ಅವರ ಯಶೋಗಾಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂದು ಕೋಣೆಯ ಮನೆ ಮತ್ತು 2,500 ರೂ. ಸಂಬಳದ ಕೆಲಸ:
ಪಂಜಾಬ್‌ನ ಹೊಶಿಯಾರ್‌ಪುರದ ಬಡ ಕುಟುಂಬದಲ್ಲಿ ಜನಿಸಿದ ಅಶ್ವಿನಿ, ಬಾಡಿಗೆಯ ಒಂದು ಕೋಣೆಯ ಮನೆಯಲ್ಲಿ ಬೆಳೆದರು. 18ನೇ ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆದಾಗ ಸಮಾಜ ಅವರನ್ನು ‘ಸೋತವನು’ ಎಂದು ಹೀಯಾಳಿಸಿತು. ಇದರಿಂದಾಗಿ ಅವರು ಮನೆ ಬಿಡಬೇಕಾಗಿ ಬಂತು. ನಂತರ 20ನೇ ವಯಸ್ಸಿನಲ್ಲಿ ಕೇವಲ 2,500 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡರು.
ಮೊದಲ ಬಿಸಿನೆಸ್ ಯಶಸ್ಸು ಮತ್ತು ದಿಢೀರ್ ಕುಸಿತ:
ತಮ್ಮ 21ನೇ ವಯಸ್ಸಿನಲ್ಲಿ ಸ್ವಂತ ಉದ್ಯಮ ಆರಂಭಿಸಿದ ಇವರು, ಪತ್ನಿ ಹರ್ದೀಪ್ ಕೌರ್ ಬೆಂಬಲದೊಂದಿಗೆ ಕೇವಲ ಎರಡೇ ವರ್ಷಗಳಲ್ಲಿ ಕಂಪನಿಯ ಟರ್ನೋವರ್ ಅನ್ನು 2 ಕೋಟಿ ರೂಪಾಯಿಗೆ ತಲುಪಿಸಿದರು. ಆದರೆ, 23ನೇ ವಯಸ್ಸಿನಲ್ಲಿ ಬಂದ ಕ್ಷಯರೋಗ (Tuberculosis) ಇಡೀ ಬಿಸಿನೆಸ್ ಅನ್ನು ನಾಶಪಡಿಸಿತು.
ಪತ್ನಿಯ ಸಾವು ಮತ್ತು ಕಾರ್ಪೊರೇಟ್ ವಲಯದಲ್ಲಿ ಮರುಹುಟ್ಟು:
27ನೇ ವಯಸ್ಸಿನಲ್ಲಿ ಪತ್ನಿ ಹರ್ದೀಪ್ ಕೌರ್ ಅವರನ್ನು ಕಳೆದುಕೊಂಡದ್ದು ಅಶ್ವಿನಿ ಅವರಿಗೆ ಎದುರಾದ ಅತಿ ದೊಡ್ಡ ಆಘಾತ. ಆದರೆ, ಸಾವಿಗೂ ಮುನ್ನ “ಯಾವತ್ತೂ ಸೋಲೊಪ್ಪಿಕೊಳ್ಳಬೇಡ” ಎಂದಿದ್ದ ಪತ್ನಿಯ ಮಾತುಗಳನ್ನೇ ಪ್ರೇರಣೆಯಾಗಿಸಿಕೊಂಡು ಕಾರ್ಪೊರೇಟ್ ಜಗತ್ತಿಗೆ ಮರಳಿದರು. ಶ್ರಮವಹಿಸಿ ದುಡಿದು ಕಂಪನಿಯೊಂದರ ಸೇಲ್ಸ್ ಅಂಡ್ ಮಾರ್ಕೆಟಿಂಗ್ ವಿಭಾಗದ ವೈಸ್ ಪ್ರೆಸಿಡೆಂಟ್ ಆದರು. ತಮ್ಮ ನಾಯಕತ್ವದಲ್ಲಿ ಕಂಪನಿಯ ವ್ಯಾಪಾರವನ್ನು 2 ಕೋಟಿಯಿಂದ 100 ಕೋಟಿಗೂ ಅಧಿಕ ಮಟ್ಟಕ್ಕೆ ಬೆಳೆಸಿದರು.
ಅಪಘಾತ ಮತ್ತು 40ನೇ ವಯಸ್ಸಿನಲ್ಲಿ ಹೊಸ ಆರಂಭ:
2020ರ ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಎರಡು ಬಾರಿ ತೀವ್ರ ಕೋವಿಡ್ ಸೋಂಕಿಗೆ ಒಳಗಾದರು. ಅದೇ ಸಮಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಇವರನ್ನು ತಿಂಗಳುಗಳ ಕಾಲ ಹಾಸಿಗೆ ಹಿಡಿಯುವಂತೆ ಮಾಡಿತು. ಆದರೆ ಆrecovery ಸಮಯದಲ್ಲಿಯೇ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಎಚ್‌ಡಿ (PhD) ಪದವಿ ಪೂರ್ಣಗೊಳಿಸಿದರು.
ಅಂತಿಮವಾಗಿ 2024ರಲ್ಲಿ, ತಮ್ಮ 40ನೇ ವಯಸ್ಸಿನಲ್ಲಿ ಹೈ-ಸ್ಯಾಲರಿ ಇದ್ದ ವಿಪಿ ಹುದ್ದೆಯನ್ನು ತೊರೆದು ತಮ್ಮದೇ ಆದ ಹೊಸ ಸ್ಟಾರ್ಟ್‌ಅಪ್ ಆರಂಭಿಸಿದರು. ಸದ್ಯ ಇವರ ಸ್ಪೂರ್ತಿದಾಯಕ ಕಥೆ ಯುವ ಉದ್ಯಮಿಗಳಿಗೆ ದಾರಿದೀಪವಾಗಿದೆ.





Leave a comment