SUDDIKSHANA KANNADA NEWS/ DAVANAGERE/ DATE:09-01-2024
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ಪೊಲೀಸರ ಈ ಕ್ರಮ ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ರಾಜ್ಯ ಸರ್ಕಾರ ಗುರಿಯಾಗುವಂತೆ ಮಾಡಿದೆ. ಹೋರಾಟಕ್ಕೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ.
ಡಿಸೆಂಬರ್ 27ರಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಬಂಧಿಸಲಾಗಿತ್ತು. ಇಂದು ಬಿಡುಗಡೆಯಾಗುತ್ತಾರೆ ಎಂಬ ಮಾಹಿತಿ ಇತ್ತು. ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದ್ರೆ, ಇಂದು ಜೈಲಿನಿಂದ ಹೊರಬರುತ್ತಿದ್ದಂತೆ ಪೊಲೀಸರು ಆಸ್ತಿ ಪಾಸ್ತಿ ನಷ್ಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ವಶಕ್ಕೆ ಪಡೆಯಲಾಗಿದೆ. ನಾರಾಯಣಗೌಡರನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದೊಯ್ಯಲಾಗಿದೆ. 13 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು.
ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಶನಿವಾರ ಜಾಮೀನು ಸಿಕ್ಕಿದ್ದರೂ ನಾರಾಯಣಗೌಡರಿಗೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.
ಕನ್ನಡ ನಾಮಫಲಕ ವಿಚಾರ ಸಂಬಂಧ ಹೋರಾಟ ಮಾಡಿದ್ದರಿಂದ ಬಂಧಿಸಲಾಗಿದೆ. 2017ರಲ್ಲಿ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹದಿನಾರು ಬಾರಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಮಾತ್ರವಲ್ಲ, ಖುದ್ದು ನ್ಯಾಯಾಲಯವೇ ಆರೋಪಿ ಬಂಧಿಸುವಂತೆ ಆದೇಶಿಸಿತ್ತು.