SUDDIKSHANA KANNADA NEWS/ DAVANAGERE/ DATE:17-03-2025
ದಾವಣಗೆರೆ: ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಮಾಯಕೊಂಡ ಪೊಲೀಸರು 2,80 ಸಾವಿರ ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ದಾವಣಗೆರೆ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದ ಸುಮಂಗಳಮ್ಮ ಅವರು ಕಳೆದ ಮಾರ್ಚ್ 12ರಂದು ಬೆಳಗ್ಗೆ 6.30 ಸಮಯದಲ್ಲಿ ತಮ್ಮ ಮನೆಯಿಂದ ಕಳವೂರು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ಅವರ ಕೊರಳಿದ್ದ 50 ಗ್ರಾಂ ನ ಬಂಗಾರದ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ದೋಚಿದ್ದರು.
ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಸುಮಂಗಳಮ್ಮ ದೂರು ಕೊಟ್ಟಿದ್ದರು.
ಮಾಯಕೊಂಡ ಪಿಎಸ್ಐ ಅಜಯ.ಎಸ್. ಬಿ. ಮತ್ತು ಹದಡಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿರವರ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ದಾವಣಗೆರೆ ನಗರದ ರಾಮನಗರದ ಆಟೋ ಡ್ರೈವರ್ ರವಿಕಿರಣ (27) ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ, ಈ ವ್ಯಕ್ತಿಯು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆರೋಪಿತನಿಂದ ಒಟ್ಟು 50 ಗ್ರಾಂ ತೂಕದ 2 ಲಕ್ಷ ರೂ ಮೊತ್ತದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ ಸುಮಾರು 80,000 ರೂ ಮೌಲ್ಯದ ಹೊಂಡಾ ಶೈನ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈತನೊಂದಿಗೆ ಪ್ರಕರಣದಲ್ಲಿ ಸಹಚರರಾದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ತಡಗ ಕಾಲೋನಿಯ ಕೂಲಿ ಕಾರ್ಮಿಕ ರಮೇಶ (47), ಅಜ್ಜಂಪುರ ತಾಲೂಕಿನ ಹಮಾಲಿ ಕೆಲಸಗಾರ ಮನು ಅಲಿಯಾಸ್ ಮನೋಜ (23) ತಪ್ಪಿಸಿಕೊಂಡಿದ್ದು, ಪತ್ತೆಗೆ ಶೋಧ ಮುಂದುವರಿದಿದೆ.
ಆರೋಪಿ ಹಿನ್ನೆಲೆ:
ಮಂಗಳೂರಿನಲ್ಲಿ 5 ಸರಗಳ್ಳತನ ಪ್ರಕರಣಗಳ, ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 1 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಈ ಸರಗಳ್ಳತನ ಪ್ರಕರಣವನ್ನು ಮಾಯಕೊಂಡ ವೃತ್ತ ಕಛೇರಿಯ ಸಿ.ಪಿ.ಐ ನಾಗರಾಜ ಡಿ. ಮಾರ್ಗದರ್ಶನದಲ್ಲಿ ಪಿಎಸ್ಐ ಅಜಯ ಎಸ್. ಬಿ. ಮತ್ತು ಹದಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಶೈಲ ಪಟ್ಟಣಶೆಟ್ಟಿರವರ ನೇತೃತ್ವದಲ್ಲಿ
ಮಾಯಕೊಂಡ ಠಾಣೆಯ ಮತ್ತು ಹದಡಿ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಕರಿಬಸಪ್ಪ ಎಎಸ್ಐ, ಲೋಕ್ಯನಾಯ್ಕ, ಅಣ್ಣಯ್ಯ, ಮಾರುತಿ, ರಾಮಕೃಷ್ಣ, ಶ್ರೀನಿವಾಸ, ತಿಮ್ಮೇಶ್, ರಾಜು ಲಮಾಣಿ, ದಾದಪೀರ್ ಚಾಲಕ ದಾದಪೀರ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ರಾಮಚಂದ್ರ ಜಾಧವ್, ಅರುಣ ಇತರರನ್ನೊಳಗೊಂಡ ತಂಡವು ಸರಗಳ್ಳತನ ಆರೋಪಿತರನ್ನು ಪ್ರಕರಣ ದಾಖಲಾಗಿ ಕೇವಲ 48 ಗಂಟೆಗಳಲ್ಲಿ ಭೇದಿಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪತ್ತೆ ಕಾರ್ಯ ತಂಡವನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.