SUDDIKSHANA KANNADA NEWS/ DAVANAGERE/ DATE:09-03-2025
ದಾವಣಗೆರೆ: ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದು, ಒಟ್ಟು 10 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಜನವರಿ 31ರಂದು ಪ್ರಕರಣದ ದೂರು ದಾರರಾದ ಶಾಮನೂರಿನ ಮಂಜುನಾಥ್ ಹೆಚ್. ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಕೆ.ಎ17/ಇಡಬ್ಲ್ಯೂ/0165 ನೇ ಹಿರೋ ಸ್ಟೈಂಡರ್ ಪ್ಲಸ್ ಬೈಕ್ ಅನ್ನು 2024ರ ಡಿಸೆಂಬರ್ ರಾತ್ರಿ 10.30ರ ಸುಮಾರಿಗೆ ಸಿ.ಜಿ. ಆಸ್ಪತ್ರೆ ಆವರಣದ ತುರ್ತು ಚಿಕಿತ್ಸಾ ಘಟಕದ ಹತ್ತಿರ ನಿಲ್ಲಿಸಿ ನಂತರ ವಾಪಸ್ಸು ಬೆಳಿಗ್ಗೆ 6 ಗಂಟೆಗೆ ಹೋಗಿ ನೋಡಿದಾಗ ಬೈಕ್ ನಿಲ್ಲಿಸಿದ್ದ ಜಾಗದಲ್ಲಿ ಇರುವುದಿಲ್ಲ. ಯಾರೋ ಕಳ್ಳರು ಬೈಕನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಕಳವು ಮಾಡಿಕೊಂಡು ಹೋದ ಆರೋಪಿತರನ್ನು ಪತ್ತೆ ಮಾಡಿ ಬೈಕ್ ಅನ್ನು ಹುಡುಕಿ ಕೊಡಿ ಅಂತಾ ಮನವಿ ಮಾಡಿದ್ದರು.
ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹಾಗೂ ಸಿಬ್ಬಂದಿಗಳ ತಂಡವು ಮಾರ್ಚ್ 5ರಂದು ಮಧ್ಯಾಹ್ನ ಠಾಣಾ ಸರಹದ್ದಿನ ರೈಲ್ವೇ ಸ್ಟೇಷನ್ ಬಳಿ ಗಸ್ತಿನಲ್ಲಿರುವಾಗ ಒಂದು ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಅನುಮಾನಾಸ್ಪದವಾಗಿ
ಕಂಡು ಬಂದ ಇಬ್ಬರು ವ್ಯಕ್ತಿಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡರು.
ಹೆಚ್ಚಿನ ವಿಚಾರಣೆ ಕೈಗೊಂಡಾಗ ಆರೋಪಿತರ ಬಗ್ಗೆ ಸುಳಿವು ದೊರೆತಿದ್ದು, ಮಾಹಿತಿ ಆಧರಿಸಿ ಆರೋಪಿತರಾದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿ ಗ್ರಾಮದ ಗಂಗರಾಜು ಎಂ. ಅಲಿಯಾಸ್ ಎಮ್ಮೆ ಗಂಗ ಮತ್ತು
ಖಾನಹೊಸಹಳ್ಳಿ ಗ್ರಾಮದ ಒಮೇಶ್ ಕೆ.ಪಿ (36) ಬಂಧಿಸಲಾಯಿತು.
ಕಳ್ಳತನ ಮಾಡಿದ್ದ 2, 50, 000 ರೂ ಮೌಲ್ಯದ ಒಟ್ಟು 10 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿತರುಗಳು ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರೋಪಿತರ ಹಿನ್ನೆಲೆ:
ಆರೋಪಿತರು ಕಳ್ಳತನ ಮಾಡಿದ 10 ಬೈಕುಗಳು ಹೀರೋ ಹೊಂಡಾ ಸೈಂಡರ್ ಪ್ಲಸ್ ಬೈಕುಗಳಾಗಿರುತ್ತವೆ. ಪ್ರಕರಣದ ಪ್ರಮುಖ ಆರೋಪಿ ವಿರುದ್ಧ ವಿಜಯನಗರ ಜಿಲ್ಲೆ ಕೊಟ್ಟೂರು ಠಾಣೆಯಲ್ಲಿ ಬೈಕ್ ಕಳ್ಳತನದ ಕೇಸು ಇರುತ್ತದೆ.
ಬೈಕ್ ಕಳ್ಳರನ್ನು ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವ ಕಾರ್ಯಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಎಂ.ಆರ್ ಚೌಬೆ, ಪಿಎಸ್‌ಐ ನಾಗರಾಜ್ ಬಿ.ಆರ್., ಲತಾ ವಿ ತಾಳೇಕರ್, ಅನ್ನಪೂರ್ಣಮ್ಮ, ಜಿ.ಎಲ್, ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಧ್ರುವ, ಬಸವರಾಜ ಡಿ, ಬಸವರಾಜ, ರಾಮಾಂಜನೇಯ ಕೊಂಡಿ ಮತ್ತು ಜಿಲ್ಲಾ ಪೊಲೀಸ್ ಕಛೇರಿ ಸಿಬ್ಬಂದಿಯವರಾದ ಶಿವಕುಮಾರ್, ರಾಮಚಂದ್ರ ಬಿ. ಜಾಧವ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.