SUDDIKSHANA KANNADA NEWS/DAVANAGERE/DATE:08_12_2025
ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್. ಹೆಚ್. 48ರ ಬಳಿ ಹೊನ್ನೂರು ಗ್ರಾಮಕ್ಕೆ ಹೋಗುವ ರಸ್ತೆ ಮಧ್ಯೆ ಮಲ್ಲಿಕಾರ್ಜುನ ಎಂಬುವವರ ಮನೆಯ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ರಾಟ್ ವೈಲರ್ ನಾಯಿಗಳು ದಾಳಿ ನಡೆಸಿ ಹತ್ಯೆಗೈದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನಗಳ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ನಾಯಿಗಳ ಮಾಲೀಕನು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
ದಾವಣಗೆರೆಯ ದೇವರಾಜ ಅರಸ ಬಡಾವಣೆಯ ಶೈಲೇಶ್ ಕುಮಾರ್ (27) ಬಂಧಿತ ಆರೋಪಿ.
ಘಟನೆ ಹಿನ್ನೆಲೆ:
ಕಳೆದ ಡಿಸೆಂಬರ್ 5ರಂದು ಮಧ್ಯರಾತ್ರಿ ಸುಮಾರು 12.30 ರಿಂದ 2.30ರ ಸುಮಾರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಎನ್.ಹೆಚ್-48 ಬಳಿ ಹೊನ್ನೂರು ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ಮಲ್ಲಿಕಾರ್ಜುನ ಎಂಬುವರ ಮನೆಯ ಮುಂದಿನ ರಸ್ತೆಯಲ್ಲಿ ಹೊನ್ನೂರು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ ಎಂಬುವವರ ಮೇಲೆ ಎರಡು ರಾಟ್ ವೈಲರ್ ನಾಯಿಗಳು ಮೈಮೇಲೆ ಎರಗಿ ಆಕೆಯ ಮುಖ,ಕೈ-ಕಾಲುಗಳ ಪರಚಿ ಮಾಂಸ ಕಿತ್ತು ತಿಂದು ಹಾಕಿದ್ದವು.
ತೀವ್ರವಾಗಿ ಗಾಯಗೊಂಡ ಅನಿತಾ ಅವರನ್ನು ಜಮೀನಿಗೆ ನೀರು ಹಾಯಿಸಲು ಹೋಗಿದ್ದ ಹೊನ್ನೂರು ಕರಿಬಸಪ್ಪ ಮತ್ತು ಮಲ್ಲಿಕಾರ್ಜುನ ಅವರು ನೋಡಿ ನಾಯಿಗಳು ಓಡಿಸಲು ಪ್ರಯತ್ನಿಸಿದರೂ ನಾಯಿಗಳು ಹೋಗದೆ ಇದ್ದುದ್ದರಿಂದ ಕೂಡಲೇ 112 ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಸಹಾಯದಿಂದ ನಾಯಿಗಳನ್ನು ಓಡಿಸಿ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದರು. ತೀವ್ರವಾಗಿ ಗಾಯಗೊಂಡಿದ್ದ ಅನಿತಾ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಕೆ ಸಂಬಂಧಿಕರ ಜೊತೆ ಚಿಕಿತ್ಸೆಗೆ ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಹೆಚ್ಚಿನ ಚಿಕಿತ್ಸೆಗೆಂದು ಅನಿತಾ ಅವರನ್ನು ಬೆಂಗಳೂರುಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಬೆಳಿಗ್ಗೆ 9 ಗಂಟೆಗೆ ಶಿರಾದ ಬಳಿ ಮೃತಪಟ್ಟಿದ್ದರು. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅನಿತಾ ಅವರ ಸಾವಿಗೆ ಕಾರಣವಾದ 2 ರಾಟ್ ವೈಲರ್ ನಾಯಿಗಳನ್ನು ನಿರ್ಲಕ್ಷತನದಿಂದ ಬಿಟ್ಟು ಹೋಗಿದ್ದ ಮಾಲೀಕರನ್ನು ಪತ್ತೆ ಹಚ್ಚುವಂತೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಕೆ. ಟಿ. ಅಣ್ಣಯ್ಯರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ರಮೇಶ್ ಮತ್ತು ನಾಗಭೂಷಣ ಅವರನ್ನೊಳಗೊಂಡ ತಂಡವು ವಿವಿಧ ಕಡೆ ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ, ಮಹಿಳೆ ಸಾವಿಗೆ ಕಾರಣವಾಗಿದ್ದ ರಾಟ್ ವೀಲರ್ ನಾಯಿಗಳ ಮಾಲೀಕ ದಾವಣಗೆರೆಯ ದೇವರಾಜ ಅರಸ ಬಡಾವಣೆಯ ಶೈಲೇಶ ಕುಮಾರನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಬ್ರಾಡೋ, ಪಪ್ಪಿ ಮತ್ತು ಹಿರೋ ಎಂಬ ಹೆಸರಿಟ್ಟಿರುವ 3 ರಾಟ್ ವೀಲರ್ ನಾಯಿಗಳನ್ನು ಸಾಕಿದ್ದು, ಈ ಪೈಕಿ ಪಪ್ಪಿ ಮತ್ತು ಹಿರೋ ನಾಯಿಗಳು ಇತ್ತೀಚಿಗೆ ನಮ್ಮ ಮೇಲೆ ದಾಳಿಗೆ ಯತ್ನಿಸಿದ್ದವು. ಇತ್ತೀಚೆಗೆ ಮಾವ ಶಿವಕುಮಾರ ರವರಿಗೆ ಹಾಗೂ ನನಗೆ ಹೊಟ್ಟೆಗೆ ಪರಚಿದ್ದರಿಂದ ಬೇಸರಗೊಂಡು ಇವುಗಳನ್ನು ಡಿಸೆಂಬರ್ 4ರಂದು ರಾತ್ರಿ 10.30ರ ಸುಮಾರಿಗೆ ಪಪ್ಪಿ ಮತ್ತು ಹಿರೋ ನಾಯಿಗಳನ್ನು ಹೊನ್ನೂರು ಬಳಿ ಬಿಟ್ಟು ಬಂದಿದ್ದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.
ಆರೋಪಿತನು ಈ ನಾಯಿಗಳು ದಾಳಿ ನಡೆಸಿದಲ್ಲಿ ಜನರ ಪ್ರಾಣಕ್ಕೆ ಹಾನಿ ಉಂಟಾಗುತ್ತದೆಂದು ಗೊತ್ತಿದ್ದರೂ ಸಹ ನಿರ್ಲಕ್ಷತನದಿಂದ ನಾಯಿಗಳು ಬಿಟ್ಟು ಹೋಗಿದ್ದರ ಪರಿಣಾಮವಾಗಿ ಅಮಾಯಕ ಹೆಣ್ಣು ಮಗಳು ಅನಿತಾ ಅವರ ಮೇಲೆ ಈ ನಾಯಿಗಳು ದಾಳಿ ಮಾಡಿ ತೀವ್ರವಾದ ಗಾಯಗೊಳಿಸಿದ್ದರ ಪರಿಣಾಮ ಮೃತಪಟ್ಟಿದ್ದರು. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:403/2025 ಕಲಂ:291, 105, 106(1) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ,ಈ ಪ್ರಕರಣದ ಆರೋಪಿತ ಶೈಲೇಶ ಕುಮಾರನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಆರೋಪಿತನನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಅಣ್ಣಯ್ಯ ಕೆ.ಟಿ ಅವರ ನೇತೃತ್ವದ ತಂಡದಲ್ಲಿದ್ದ ರಮೇಶ್, ನಾಗಭೂಷಣ್ ಅವರನ್ನು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.





Leave a comment