SUDDIKSHANA KANNADA NEWS/ DAVANAGERE/ DATE:19-09-2024
ದಾವಣಗೆರೆ: ಮರಳಿನ ವಿಚಾರಕ್ಕೆ ಎರಡು ಗ್ರಾಮಗಳ ನಡುವೆ ನಡೆದ ಘರ್ಷಣೆಯಲ್ಲಿ ವ್ಯಕ್ತಿ ಕೊಲೆ ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸೇರಿದಂತೆ ಏಳು ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.
ಹೆಚ್. ಕಡದಕಟ್ಟೆ ಗ್ರಾಮದ ಸತೀಶ್, ಅಭಿ, ರಾಘವೇಂದ್ರ, ಸಂದೀಪ, ಸುಜಯ್, ಶೇಖರಪ್ಪ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಬಂಧಿತ ಆರೋಪಿಗಳು.
ಮರಳು ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಶಿವರಾಜ್ ತಗಾದೆ ತೆಗೆಯುತ್ತಿದ್ದ. ಸಣ್ಣಪುಟ್ಟ ಗಲಾಟೆ ಆಗುತಿತ್ತು. ಆದ್ರೆ, ಬುಧವಾರದಂದು ಮರಿಗೊಂಡನಹಳ್ಳಿ ಹಾಗೂ ಕಡದಕಟ್ಟೆ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಶಿವರಾಜ್ ನನ್ನು ಗುರಿಯಾಗಿಸಿಕೊಂಡು ಚಾಕುವಿನಿಂದ ಇರಿಯಲಾಗಿತ್ತು. ಏಳು ಆರೋಪಿಗಳು ಸೇರಿಕೊಂಡು ಈ ಕೃತ್ಯ ಎಸಗಿದ್ದು, ಬಂಧಿಸಲಾಗಿದೆ. ಉಳಿದಂತೆ ತನಿಖೆ ಮುಂದುವರಿಸಲಾಗಿದೆ. ಸದ್ಯಕ್ಕೆ ಈ ಆರೋಪಿಗಳನ್ನು ಸೆರೆ ಹಿಡಿದಿರುವುದಾಗಿ ನ್ಯಾಮತಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಿಗೊಂಡನಹಳ್ಳಿ ಹಾಗೂ ಕಡದಕಟ್ಟೆ ಗ್ರಾಮಗಳ ವ್ಯಾಪ್ತಿಯಲ್ಲಿನ ತುಂಗಭದ್ರ ನದಿಪಾತ್ರದ ಮರಳಿಗಾಗಿ ಘರ್ಷಣೆ ನಡೆದಿತ್ತು. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದ್ದು, ಆದ್ರೂ ಬೂದಿಮುಚ್ಚಿದ ಕೆಂಡದಂತಿದೆ. ಪೊಲೀಸರು ನಿಗಾ ವಹಿಸಿದ್ದಾರೆ.