SUDDIKSHANA KANNADA NEWS/ DAVANAGERE/ DATE:06-01-2024
ದಾವಣಗೆರೆ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಗಳೇ ಅನುಭವ ಮಂಟಪಗಳಾಗಿದ್ದು, ಕಿರಿಯರು ಮತ್ತು ಹಿರಿಯರನ್ನು ಒಂದೆಡೆ ಒಗ್ಗೂಡಿಸಿ ಪ್ರೀತಿ ಆರೈಕೆ ಟ್ರಸ್ಟ್ ಆರೋಗ್ಯ ದಾಸೋಹ ನೀಡುತ್ತಿರುವುದು ಧನ್ಯತೆ ನೀಡಿದೆ ಎಂದು ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಹೇಳಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿಯ ಪ್ರಕೃತಿ ವಿದ್ಯಾಲಯದಲ್ಲಿ ಆರೈಕೆ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯವೇ ಭಾಗ್ಯವೆಂಬುದು ಎಲ್ಲಾ ವಯೋಮಾನದವರಿಗೂ ಅನ್ವಯ ಆಗುತ್ತಿದೆ. ಅಬಾಲ ವೃದ್ಧರ ಆದಿಯಾಗಿ ಎಲ್ಲರೂ ಕೂಡ ಆರೋಗ್ಯದಿಂದ ಇದ್ದಾಗ ಪ್ರತಿ ಮನೆಯ ವಾತಾವರಣವೂ ಕೂಡ ಸಂತೋಷದಿಂದ ಇರುತ್ತದೆ. ಇದರಿಂದಾಗಿ, ಎಲ್ಲರೂ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು, ಪ್ರಗತಿ ಹೊಂದಲು ಸಾಧ್ಯವಿದೆ. ಪ್ರತಿಯೊಬ್ಬ ಪ್ರಜೆಯ ಪ್ರಗತಿಯೇ ಭಾರತದ ಪ್ರಗತಿ ಎಂಬ ಧ್ಯೇಯದ ಸಾಕಾರಕ್ಕಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ದೇಶದ ಪ್ರಜೆಗಳಾದ ನಾವೆಲ್ಲರೂ ಆರೋಗ್ಯವಂತರಾಗಿ ಇರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಾವು ಭಾವಿಸಬೇಕು. ನಾವೆಲ್ಲರೂ ಸ್ವಾಸ್ಥರಿದ್ದಾಗ ಮಾತ್ರವೇ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಿದೆ. ಹೀಗಾಗಿ, ಭಾರತವನ್ನು ವಿಶ್ವದ ಸರ್ವಶ್ರೇಷ್ಠ ದೇಶ ಮಾಡಲು ನಾವೆಲ್ಲರೂ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿ ಇರಬೇಕಿದೆ. ಆರೋಗ್ಯವಂಥ ಸಮಾಜವು ಆರೋಗ್ಯವಂತ ಚಿಂತನೆ, ಕಾರ್ಯಗಳಿಗೆ ಮುನ್ನುಡಿ ಬರೆಯುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಮ್ಮ ಕುಟುಂಬ, ಊರು, ರಾಜ್ಯ, ದೇಶದ ಪ್ರಗತಿಗೆ ಶ್ರಮಾದಾನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳೊಂದಿಗೆ ಸಂವಾದ:
ಪ್ರಕೃತಿ ವಿದ್ಯಾಲಯದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಜತೆಗೆ ಡಾ. ರವಿಕುಮಾರ್ ಟಿ.ಜಿ ಸಂವಾದ ನಡೆಸಿದರು. ಶಾಲಾ ವಯಸ್ಸಿನ ಮಕ್ಕಳಲ್ಲಿನ ಆರೋಗ್ಯದ ತೊಂದರೆಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತಿಳುವಳಿಕೆ ಮೂಡಿಸಿದರು. ನಂತರ, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು, ಸಂದೇಹಗಳನ್ನು ಕೇಳಿ, ಸಾಧ್ಯ ಪರಿಹಾರ ತಿಳಿಸಿದರು. ಉನ್ನತ ವ್ಯಾಸಾಂಗದ ಬಗ್ಗೆ ಹೇಗೆ ಸಿದ್ಧತೆ, ತಯಾರಿ ಇರಬೇಕು ಎಂಬ ಮಾಹಿತಿಗಳನ್ನೂ ನೀಡಿದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಜಿ. ರವಿಕುಮಾರ್, ಲೋಹಿತ್ ಕುಮಾರ್, ಮುಖ್ಯೋಪಾಧ್ಯಾಯ ಎಸ್.ಆರ್. ಮನು ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ತ್ಯಾವಣಗಿಯ ಪ್ರಕೃತಿ ವಿದ್ಯಾಲಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣೆಯ ವೇಳೆ ಪ್ರಕೃತಿ ವಿದ್ಯಾಲಯದ ವಿದ್ಯಾರ್ಥಿಗಳ ಜತೆ ಡಾ. ರವಿಕುಮಾರ್ ಟಿ.ಜಿ. ಸಂವಾದ ನಡೆಸಿದರು.