SUDDIKSHANA KANNADA NEWS/ DAVANAGERE/ DATE:26-10-2023
ದಾವಣಗೆರೆ: ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಮೀನುಗಾರಿಕೆ ಇಲಾಖೆ ಫಲಾನುಭವಿ ಆಧಾರಿತ ಯೋಜನೆಗಳಿಗೆ ವೃತ್ತಿಪರ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ, ರಿವರ್ ಗ್ಲಾಸ್ ಹರಿಗೋಲು ವಿತರಣೆ, ಮತ್ಸ್ಯಾ ವಾಹಿನಿ ಮತ್ತು ಮೀನು ಮಾರಾಟಕ್ಕೆ ಸಹಾಯ, ಮೀನು ಸಾಗಾಣಿಕೆ ವಾಹನ ಖರೀದಿಗೆ ಸಹಾಯ ಸೌಲಭ್ಯಗಳನ್ನು ನೀಡಲಾಗುವುದು.
ಆಸಕ್ತ ಮತ್ತು ಅರ್ಹ ಮೀನುಗಾರರು ನವಂಬರ್ 11 ರೊಳಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ಡಿ.ಅಣ್ಣಪ್ಪಸ್ವಾಮಿ ತಿಳಿಸಿದ್ದಾರೆ.
ಸಿಬಿಎಸ್‌ಇ ಕ್ಲಸ್ಟರ್ -8 ಅಥ್ಲೆಟಿಕ್ಸ್ ಕ್ರೀಡಾಕೂಟ:
ತೋಳಹುಣಸೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರ ಶಿವಶಂಕರಪ್ಪ ವಸತಿಯುತ ಶಾಲಾ ಮೈದಾನದಲ್ಲಿ ಸಿಬಿಎಸ್ ಇ ಕ್ಲಸ್ಟರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ.
ಅ. 28 ರ ವರೆಗೆ ಸಿಬಿಎಸ್‌ಇ ಕ್ಲಸ್ಟರ್ -8 ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ 475 ಸಿಬಿಎಸ್‌ಇ ಶಾಲೆಗಳ 4,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಕ್ರೀಡಾಪಟುಗಳಿಗೆ ಸಿಬಿಎಸ್‌ಇ ನಿಯಮಾನುಸಾರ ಊಟ-ಉಪಹಾರ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಅವರು ಕ್ರೀಡಾಕೂಟದ ಸಂಚಾಲಕರಾಗಿದ್ದಾರೆ. ಕ್ರೀಡಾಕೂಟದ ವೀಕ್ಷಕರಾಗಿ ಬಸವರಾಜ ಸಜ್ಜನರ್ ನಿಯುಕ್ತಗೊಂಡಿದ್ದಾರೆ.
ಸಿಬಿಎಸ್‌ಇ ದಕ್ಷಿಣ ವಲಯ ಈಜು ಕ್ರೀಡಾಕೂಟ- 2024: ಸಿಬಿಎಸ್‌ಇ ದಕ್ಷಿಣ ವಲಯ ಈಜು ಕ್ರೀಡಾಕೂಟ- 2024 ಕೂಡ ಇದೇ 30 ರಿಂದ ನ.2 ರ ವರೆಗೆ ಇಲ್ಲಿಯೇ ಆಯೋಜನೆಗೊಂಡಿದೆ. ಈ ಕ್ರೀಡಾಕೂಟದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗೋವಾ, ಮತ್ತು ದಿವು-ದಾಮನ್,ನಗರ-ಹವೇಲಿ ಕೇಂದ್ರಾಡಳಿತ ಪ್ರದೇಶಗಳ 2,500 ಈಜು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ನಾಲ್ಕು ದಿನ ನಡೆಯುವ ಈಜು ಕ್ರೀಡಾಕೂಟದ ಕ್ರೀಡಾಪಟುಗಳಿಗೆ ಸಿಬಿಎಸ್‌ಇ ನಿಯಮಾನುಸಾರ ಊಟ-ಉಪಹಾರ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಶಾಲೆಯ ಆವರಣದಲ್ಲಿ ಈಗಾಗಲೇ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಮತ್ತು
ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಸಮರ್ಪಕವಾಗಿ, ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಮಂಜುನಾಥ ರಂಗರಾಜು ತಿಳಿಸಿದ್ದಾರೆ.