ನವದೆಹಲಿ: 2022ರಲ್ಲಿ ಉತ್ತರಾಖಂಡದಲ್ಲಿ ಕೊಲೆಯಾಗಿದ್ದ 19 ವರ್ಷದ ಅಂಕಿತಾ ಭಂಡಾರಿ ಅವರ ಪೋಷಕರನ್ನು ದೆಹಲಿ ಪೊಲೀಸರು ರಾತ್ರಿಪೂರ್ತಿ ನಡೆದ ಪ್ರತಿಭಟನೆಯ ನಂತರ ವಶಕ್ಕೆ ಪಡೆದು, ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿ ನ್ಯಾಯಕ್ಕಾಗಿ ಆಗ್ರಹಿಸಿ ಅವರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ದುಶ್ಯಂತ್ ಕುಮಾರ್ ಗೌತಮ್ ಅವರ ಹೆಸರು ಕೇಳಿಬಂದಿದ್ದು, ಸಿಬಿಐ (CBI) ತನಿಖೆ ಪೂರ್ಣಗೊಳ್ಳುವವರೆಗೆ ಅವರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ನೀಡಬಾರದು ಎಂದು ಪೋಷಕರು ಆಗ್ರಹಿಸಿದ್ದರು. ದುಶ್ಯಂತ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು, ಈ ನೇಮಕಾತಿಯನ್ನು ರದ್ದುಗೊಳಿಸಬೇಕೆಂದು ಕಾಂಗ್ರೇಸ್ ನಾಯಕರೊಂದಿಗೆ ಪೋಷಕರು ಹೋರಾಟ ನಡೆಸುತ್ತಿದ್ದಾರೆ.
ರಾಜ್ಯಪಾಲರ ನೇಮಕಾತಿ ರದ್ದತಿಗೆ ಪಟ್ಟು: ದುಶ್ಯಂತ್ ಗೌತಮ್ ಅವರ ರಾಜ್ಯಪಾಲ ಹುದ್ದೆಯ ನೇಮಕಾತಿಯನ್ನು 24 ಗಂಟೆಯೊಳಗೆ ಹಿಂಪಡೆಯಬೇಕು, ಇಲ್ಲದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅಂಕಿತಾ ತಂದೆ ಎಚ್ಚರಿಸಿದ್ದಾರೆ.
ಮನೆಯಲ್ಲಿಯೇ ಉಪವಾಸ ಸತ್ಯಾಗ್ರಹ: ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶ ನೀಡದಿದ್ದರೆ ಸ್ವಗೃಹದಲ್ಲೇ ಉಪವಾಸ ಸತ್ಯಾಗ್ರಹ ಕೂರುವುದಾಗಿ ಅಂಕಿತಾ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 2022ರ ಸೆಪ್ಟೆಂಬರ್ 18ರಂದು ಋಷಿಕೇಶದ ವಂತರಾ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರಿಗೆ ಜೀವಾವಧಿ ಶಿಕ್ಷೆಯಾಗಿದೆ.
ರಾಜಕೀಯ ಆರೋಪ: ರಾಜ್ಯಪಾಲರ ಹುದ್ದೆಗೆ ನೇಮಕ ಮಾಡುವುದರಿಂದ ಅಪರಾಧ ನಡಾವಳಿಗಳಿಂದ ಕಾನೂನು ರಕ್ಷಣೆ ಸಿಗುತ್ತದೆ ಎಂಬ ಕಾರಣಕ್ಕೆ ಈ ನೇಮಕಾತಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದರೆ, ದುಶ್ಯಂತ್ ಗೌತಮ್ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.





Leave a comment