ವಿಜಯವಾಡ: ಪತಿಯಿಂದ ಕೋರ್ಟ್ ನೋಟಿಸ್ ಬಂದಿದ್ದಕ್ಕೆ ತೀವ್ರವಾಗಿ ಮನನೊಂದ ವಿವಾಹಿತೆಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಧಾರುಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ವಾಸವಾಗಿರುವ ಪೋತುಗಂಟಿ ಸತ್ಯನಾರಾಯಣ ಅವರ ಕಿರಿಯ ಪುತ್ರಿ ಲಕ್ಷ್ಮೀ ಪ್ರಿಯಾಂಕಾ (27) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಗೊಲ್ಲಪೂಡಿ ಮೂಲದ ವೇಲ್ಪೂರಿ ಅಶೋಕ್ ಕುಮಾರ್ ಜೊತೆ ಒಂದೂವರೆ ವರ್ಷದ ಹಿಂದೆ ಲಕ್ಷ್ಮೀ ಪ್ರಿಯಾಂಕಾ ಅವರ ವಿವಾಹ ನೆರವೇರಿತ್ತು. ಆದರೆ, ದಂಪತಿ ನಡುವೆ ಮನಸ್ತಾಪ ಉಂಟಾದ ಕಾರಣ, ಕಳೆದ ಏಪ್ರಿಲ್ ತಿಂಗಳಿನಿಂದ ಲಕ್ಷ್ಮೀ ಪ್ರಿಯಾಂಕಾ ತವರು ಮನೆಯಲ್ಲೇ ನೆಲೆಸಿದ್ದರು. ಈ ನಡುವೆ, ಕಳೆದ ಶನಿವಾರ ಪತಿ ಅಶೋಕ್ ಕುಮಾರ್ ಆಕೆಗೆ ಕೋರ್ಟ್ ನೋಟಿಸ್ ಕಳುಹಿಸಿದ್ದನು. ಇದರಿಂದ ತೀವ್ರ ನೊಂದ ಆಕೆ ಅಂದೇ ಗೊಲ್ಲಪೂಡಿಯಲ್ಲಿರುವ ಪತಿಯ ಮನೆಗೆ ತೆರಳಿ ವಾಪಸ್ ಬಂದಿದ್ದಳು. ಸೋಮವಾರ ಪೋಷಕರಾದ ಸತ್ಯನಾರಾಯಣ ಮತ್ತು ಧನಲಕ್ಷ್ಮಿ ವೈದ್ಯಕೀಯ ಚಿಕಿತ್ಸೆಗಾಗಿ ವಿಜಯವಾಡದ ಆಸ್ಪತ್ರೆಗೆ ತೆರಳಿದ್ದ ವೇಳೆ, ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಪ್ರಿಯಾಂಕಾ ನೇಣಿಗೆ ಶರಣಾಗಿದ್ದಾಳೆ.
ಆಸ್ಪತ್ರೆಯಿಂದ ವಾಪಸ್ ಬಂದ ಪೋಷಕರು ಮನೆಯಲ್ಲಿ ಮಗಳು ಶವವಾಗಿ ನೇತಾಡುತ್ತಿರುವುದನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಮೃತರ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡೆತ್‌ನೋಟ್ ಲಭ್ಯ: “ತನ್ನ ಸಾವಿಗೆ ಪತಿ, ಅತ್ತೆ, ಚಿಕ್ಕತ್ತೆ ಹಾಗೂ ನಾದಿನಿಯೇ ಕಾರಣ” ಎಂದು ಲಕ್ಷ್ಮೀ ಪ್ರಿಯಾಂಕಾ ಬರೆದಿಟ್ಟಿದ್ದ ಡೆತ್‌ನೋಟ್ ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲಭ್ಯವಾಗಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕುಸುಮಕುಮಾರಿ ಹಾಗೂ ಪಮಿಡಿಮುಕ್ಕಲ ಸಿಐ ಚಿಟ್ಟಿಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲು: ಮೃತರ ತಂದೆ ಸತ್ಯನಾರಾಯಣ ನೀಡಿದ ದೂರಿನ ಮೇರೆಗೆ ಎಸ್‌ಐ ಕಿಶೋರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





Leave a comment