ಅಹಮದಾಬಾದ್: ಗುಜರಾತ್‌ನಾದ್ಯಂತ ನವರಾತ್ರಿ ಸಿದ್ಧತೆಗಳು ಜೋರಾಗಿ ನಡೆಯುತ್ತಿರುವಂತೆಯೇ, ಅಹಮದಾಬಾದ್‌ನ ಐಷಾರಾಮಿ ಕ್ಲಿನಿಕ್‌ಗಳಲ್ಲಿ ವಿನೂತನ ವೆಲ್‌ನೆಸ್ ಟ್ರೆಂಡ್ ಕಂಡುಬರುತ್ತಿದೆ. ಸಾಮಾನ್ಯವಾಗಿ ಹಬ್ಬಗಳ ಮುನ್ನ ಫೇಶಿಯಲ್ ಹಾಗೂ ಸೌಂದರ್ಯ ವರ್ಧಕ ಪ್ಯಾಕೇಜ್‌ಗಳಿಗೆ ಮುಗಿಬೀಳುತ್ತಿದ್ದ ಯುವಜನತೆ, ಈ ಬಾರಿ ಸತತ ಒಂಬತ್ತು ರಾತ್ರಿಗಳ ಗರ್ಬಾ ನೃತ್ಯಕ್ಕೆ ಅಗತ್ಯವಿರುವ ತತ್‌ಕ್ಷಣದ ಶಕ್ತಿ ಹಾಗೂ ಮುಖದ ಕಾಂತಿಗಾಗಿ ‘ಐವಿ ಡ್ರಿಪ್’ ಥೆರಪಿಯತ್ತ ಆಕರ್ಷಿತರಾಗುತ್ತಿದ್ದಾರೆ.
ವಿಟಮಿನ್ ಸಿ, ಬಿ-ಕಾಂಪ್ಲೆಕ್ಸ್, ಜಿಂಕ್ ಮತ್ತು ಗ್ಲುಟಾಥಿಯೋನ್ ಒಳಗೊಂಡಿರುವ ಈ ಕಾಗ್‌ಟೇಲ್ ಇನ್‌ಫ್ಯೂಷನ್‌ಗಳನ್ನು ಯುವಕ-ಯುವತಿಯರು ವ್ಯಾಪಕವಾಗಿ ಪಡೆದುಕೊಳ್ಳುತ್ತಿದ್ದಾರೆ.
ಆರಂಭದಲ್ಲಿ ಇದು ಜೆನ್-ಝಿ (Gen Z) ಯುವಜನತೆಯ ಹುಚ್ಚು ಎಂದು ಭಾವಿಸಲಾಗಿದ್ದರೂ, ಅಹಮದಾಬಾದ್‌ನ ಕ್ಲಿನಿಕ್‌ಗಳಲ್ಲಿ 30 ಮತ್ತು 40 ರ ಹರೆಯದ ವೃತ್ತಿಪರರು ಸಹ ಸಾಲಿನಲ್ಲಿ ನಿಂತಿರುವುದು ಕಂಡುಬರುತ್ತಿದೆ. ಹಗಲಿನಲ್ಲಿ ದೀರ್ಘಾವಧಿಯ ಕಾರ್ಪೊರೇಟ್ ಕೆಲಸ ಮತ್ತು ರಾತ್ರಿಯಲ್ಲಿ ದೀರ್ಘ ಗರ್ಬಾ ಅಭ್ಯಾಸದಿಂದ ಉಂಟಾಗುವ ತೀವ್ರ ಆಯಾಸ ಹಾಗೂ ಚರ್ಮದ ಮಂದತೆಯನ್ನು ನಿವಾರಿಸಲು ಈ 45 ನಿಮಿಷಗಳ ಐವಿ ಡ್ರಿಪ್ ಸಹಕಾರಿಯಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಬೈಪಾಸ್ ಮಾಡಿ ನೇರವಾಗಿ ರಕ್ತನಾಳಕ್ಕೆ ಪೋಷಕಾಂಶಗಳನ್ನು ತಲುಪಿಸುವುದರಿಂದ, ಮಾತ್ರೆಗಳಿಗಿಂತ ಇದು ಶೀಘ್ರ ಫಲಿತಾಂಶ ನೀಡುತ್ತದೆ ಎಂದು ಜನರು ಇದನ್ನು ಆಯ್ಕೆ ಮಾಡುತ್ತಿದ್ದಾರೆ.
ವೆಚ್ಚ ಮತ್ತು ಪ್ಯಾಕೇಜ್‌ಗಳು: ಅಹಮದಾಬಾದ್‌ನಲ್ಲಿ ಏಕಮಾತ್ರ ಐವಿ ಡ್ರಿಪ್ ಚಿಕಿತ್ಸೆಗೆ ₹4,000 ರಿಂದ ₹10,000 ವೆಚ್ಚವಾಗುತ್ತಿದ್ದು, ಹಬ್ಬದ ವಿಶೇಷ ಬಹು ಪ್ಯಾಕೇಜ್‌ಗಳ ಬೆಲೆ ಕ್ಲಿನಿಕ್ ಹಾಗೂ ಕಾಗ್‌ಟೇಲ್ ಆಧರಿಸಿ ₹15,000 ವರೆಗೆ ಇದೆ.
ತಕ್ಷಣದ ಶಕ್ತಿ ಮತ್ತು ಕಾಂತಿ: ಸುದೀರ್ಘ ನೃತ್ಯದ ನಡುವೆಯೂ ಶಕ್ತಿಯನ್ನು ಕಾಯ್ದುಕೊಳ್ಳಲು ಮತ್ತು ನವರಾತ್ರಿ ಫೋಟೋಗಳಲ್ಲಿ ಮುಖದ ಕಾಂತಿ ಕುಂದದಿರಲು ಯುವಜನತೆ ಇದನ್ನು ‘ಹಬ್ಬದ ತುರ್ತು ಪರಿಹಾರ’ವಾಗಿ ಬಳಸುತ್ತಿದ್ದಾರೆ.
ವೈದ್ಯರ ಎಚ್ಚರಿಕೆ: ವೈದ್ಯಕೀಯ ತಪಾಸಣೆಯಿಲ್ಲದೆ ಇಂತಹ ಡ್ರಿಪ್‌ಗಳನ್ನು ಪಡೆಯುವುದು ಅಪಾಯಕಾರಿ ಎಂದು ಸ್ಥಳೀಯ ಚರ್ಮರೋಗ ತಜ್ಞರು ಎಚ್ಚರಿಸಿದ್ದಾರೆ. ಸೂಕ್ತ ಪರಿಶೀಲನೆಯಿಲ್ಲದೆ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳನ್ನು ರಕ್ತಕ್ಕೆ ಚುಚ್ಚುವುದರಿಂದ ಅಲರ್ಜಿ, ಫ್ಲೂಯಿಡ್ ಓವರ್‌ಲೋಡ್ ಹಾಗೂ ಲಿವರ್ ಮೇಲೆ ಅನಗತ್ಯ ಒತ್ತಡ ಬೀಳುವ ಸಾಧ್ಯತೆಯಿದೆ.
ಸತತ ಒಂಬತ್ತು ರಾತ್ರಿಗಳ ಕಾಲ ನಡೆಯುವ ಗರ್ಬಾ ಮಹೋತ್ಸವದಲ್ಲಿ ದೈಹಿಕ ಶಕ್ತಿ ಮತ್ತು ಸೌಂದರ್ಯ ಕಾಯ್ದುಕೊಳ್ಳಲು ಅಹಮದಾಬಾದಿಗರು ಈ ಐವಿ ಡ್ರಿಪ್‌ಗಳನ್ನು ತಾತ್ಕಾಲಿಕ ಶಕ್ತಿವರ್ಧಕವಾಗಿ ಸ್ವೀಕರಿಸಿದ್ದಾರೆ. ಆದರೆ, ಸೌಂದರ್ಯ ಕ್ಲಿನಿಕ್‌ಗಳ ಈ ಟ್ರೆಂಡ್‌ಗೆ ಮರುಳಾಗುವ ಮುನ್ನ ಸೂಕ್ತ ಅರ್ಹ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.





Leave a comment