ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

EXCLUSIVE: ಅಮಿತ್ ಶಾ ಭೇಟಿ ಮಾಡಿದ ಸಿದ್ದೇಶ್ವರ ಫ್ಯಾಮಿಲಿ: ಭಿನ್ನಮತ ಸ್ಫೋಟದ ಬೆನ್ನಲ್ಲೇ ಸೋಲಿಗೆ ಕೊಟ್ಟ ಕಾರಣಗಳ್ಯಾವುವು…?

On: June 22, 2024 10:24 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:23-06-2024

ದಾವಣಗೆರೆ: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಚಾಣಕ್ಯ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಸಿದ್ದೇಶ್ವರ ಕುಟುಂಬ ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿರುವ ಜೊತೆಗೆ ಚರ್ಚೆ ಹುಟ್ಟುಹಾಕಿದೆ.

ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಎರಡೂವರೆ ದಶಕಗಳ ಬಳಿಕ ಬಿಜೆಪಿ ಸೋಲು ಕಂಡಿದೆ. ಕಳೆದೆರಡು ದಿನಗಳಿಂದ ಬಿಜೆಪಿಯಲ್ಲಿ ಭಿನ್ಮಮತ ಧಗಧಗಿಸುತ್ತಿದೆ. ಆರೋಪ ಪ್ರತ್ಯಾರೋಪ ಜೋರಾಗಿದೆ. ಜಿ. ಎಂ. ಸಿದ್ದೇಶ್ವರ ಪರ ಒಂದು ಟೀಂ, ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ಟೀಂ ಪರ ಮತ್ತೊಂದು ತಂಡ ಬ್ಯಾಟಿಂಗ್ ನಡೆಸುತ್ತಿದೆ. ಈ ಬೆಳವಣಿಗೆ ನಡುವೆ ಸಿದ್ದೇಶ್ವರ ಕುಟುಂಬದ ದೆಹಲಿ ಭೇಟಿ ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಮ್ಮ ಕುಟುಂಬಕ್ಕೆ ಏಳು ಬಾರಿ ಅವಕಾಶ ನೀಡಿದ್ದೀರಾ. ಹಾಗಾಗಿ, ನಮ್ಮ ಫ್ಯಾಮಿಲಿ ಯಾವಾಗಲೂ ಬಿಜೆಪಿ ಹೈಕಮಾಂಡ್ ಗೆ ಋಣಿಯಾಗಿರುತ್ತದೆ. ನಿಮ್ಮೆಲ್ಲರ ಆಶೀರ್ವಾದದಿಂದ ಸ್ಪರ್ಧೆ
ಮಾಡಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದೆವೆ. ಆದ್ರೆ, ಗೆಲ್ಲುವ ಸಾಧ್ಯತೆಯಿದ್ದರೂ ಬಿಜೆಪಿ ನಾಯಕರ ಒಳಗುಂಪು ಕಾಂಗ್ರೆಸ್ ಗೆ ಬೆಂಬಲಿಸಿದ್ದು, ಹೊಂದಾಣಿಕೆ ಮಾಡಿಕೊಂಡಿದ್ದು, ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿದ್ದು ನಮಗೆ
ಹಿನ್ನೆಡೆಯಾಗಲು ಕಾರಣ ಎಂಬ ದೂರು ಹೇಳಿದ್ದಾರೆ ಎನ್ನಲಾಗಿದೆ.

ಡಾ. ಜಿ. ಎಂ. ಸಿದ್ದೇಶ್ವರ, ಗಾಯಿತ್ರಿ ಸಿದ್ದೇಶ್ವರ, ಅವರ ಪುತ್ರ ಅನಿತ್ ಕುಮಾರ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮೂವರು ಹೋಗುತ್ತಿದ್ದಂತೆ ಅಮಿತ್ ಶಾ ಅವರು ಆತ್ಮೀಯವಾಗಿ
ಬರಮಾಡಿಕೊಂಡರು. ಹೂಗುಚ್ಛ ನೀಡಿ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು. ನಮ್ಮ ಕುಟುಂಬದ ಮೇಲೆ ಅಭಿಮಾನ ಇಟ್ಟು ಟಿಕೆಟ್ ನೀಡಿದ್ದೀರಾ. ಈ ಚುನಾವಣೆಯಲ್ಲಿ ಸೋಲು ನಮ್ಮ ಕುಟುಂಬಕ್ಕಾಗಿದೆ. ಗೆಲ್ಲುವ ಎಲ್ಲಾ ಸಾಧ್ಯತೆಗಳು ಇದ್ದರೂ ಪಕ್ಷ ವಿರೋಧಿ ಚಟುವಟಿಕೆಗಳಿಂದಲೇ ಪರಾಜಯ ಕಾಣಬೇಕಾಯಿತು ಎಂದು ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಅತಿ ಕಡಿಮೆ ಅಂತರದಲ್ಲಿ ಬಿಜೆಪಿ ಸೋತಿರುವುದು ದಾವಣಗೆರೆ ಕ್ಷೇತ್ರದಲ್ಲಿ. ಎಸ್. ಎ. ರವೀಂದ್ರನಾಥ್, ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸಭೆಗಳ ಮೇಲೆ ಸಭೆ ನಡೆಸಿದರು. ಮಾತ್ರವಲ್ಲ, ಟಿಕೆಟ್ ಘೋಷಣೆ ಮಾಡಿದ ಬಳಿಕವೂ ಗೊಂದಲ ಬಗೆಹರಿಯಲಿಲ್ಲ. ಜಿಲ್ಲೆಯಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇತ್ತು. ನಿಮ್ಮ ಕಾರ್ಯತಂತ್ರವೂ ಫಲಕೊಟ್ಟಿತ್ತು. ಪಕ್ಷದ ಕೆಲ ನಾಯಕರ ಅಸಹಕಾರದಿಂದಲೇ ಸೋಲು ಕಾಣುವಂತಾಯಿತು. ಇದು ನಮ್ಮವರಿಂದಲೇ ಆದ ಸೋಲು ಎಂದು ತಿಳಿಸಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ ಅವರು ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ನಮ್ಮ ಗಮನಕ್ಕೂ ಬಂದಿದೆ. ದಾವಣಗೆರೆ ಕ್ಷೇತ್ರದಲ್ಲಿ ಕನಿಷ್ಠ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಮೊದಲು ವರದಿ ಬಂದಿತ್ತು. ಚುನಾವಣಾ ಫಲಿತಾಂಶ ನೋಡಿದಾಗ ನಮಗೂ ಆಘಾತ ಆಗಿದೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳುತ್ತೇವೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ನಿಗಾ ಇಡುವ ಜೊತೆಗೆ ಕಠಿಣ ಕ್ರಮ ಜರುಗಿಸುವುದು ಖಚಿತ. ಸದ್ಯಕ್ಕೆ ಶಾಂತವಾಗಿರಿ. ಮುಂಬರುವ ಚುನಾವಣೆಗಳ ಬಗ್ಗೆ ಗಮನ ನೀಡಿ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ, ಉಪಚುನಾವಣೆ ಸೇರಿದಂತೆ ಯಾವುದೇ ಚುನಾವಣೆ ಬಂದರೂ ಒಗ್ಗಟ್ಟಾಗಿ ಮುಂದೆ ಸಾಗೋಣ ಎಂದು ಕಿವಿಮಾತು ಹಾಗೂ ಸಲಹೆ ನೀಡಿದರು ಎಂದು ನವದೆಹಲಿಯ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 26 ವರ್ಷಗಳ ಬಳಿಕ ಬಿಜೆಪಿ ಸೋಲು ಕಂಡಿದೆ. ಸಿದ್ದೇಶ್ವರ ಅವರು ನಾಲ್ಕು ಬಾರಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಆರೋಗ್ಯ ಸಮಸ್ಯೆ, ಮಾಜಿ ಸಚಿವರಾದ ಎಸ್.. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ನೇತೃತ್ವದ ಲಗಾನ್ ಟೀಂ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಆದ್ರೆ, ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ ಅವರು ಅಭ್ಯರ್ಥಿಯಾದರು. ದಾವಣಗೆರೆ ಜಿಲ್ಲೆಯ ಜನರು, ಬಿಜೆಪಿ ಕಾರ್ಯಕರ್ತರು ನಮ್ಮ ಕುಟುಂಬದ ಮೇಲೆ ಅತಿಯಾದ ಅಭಿಮಾನ ತೋರಿದ್ದಾರೆ. ಆರು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಕಾಂಗ್ರೆಸ್ ಚುನಾವಣೆಯಲ್ಲಿ ನೂರಾರು ಕೋಟಿ ರೂಪಾಯಿ ಹಂಚಿದ ಪರಿಣಾಮ, ಬಿಜೆಪಿಯೊಳಗಿನ ಹೊಡೆತದಿಂದ ಸೋತಿದ್ದೇವೆ ಎಂದು ಸಿದ್ದೇಶ್ವರ ಅವರು ಹೇಳಿದರು.

ಅಮಿತ್ ಶಾ ಅವರಿಗೆ ಅನಿತ್ ಕುಮಾರ್, ಗಾಯಿತ್ರಿ ಸಿದ್ದೇಶ್ವರ ಅವರು ಟಿಕೆಟ್ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಕಳೆದ 20 ವರ್ಷಗಳಲ್ಲಿ ತಂದೆ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದರು. ನರೇಂದ್ರ ಮೋದಿ, ಬಿಜೆಪಿ ಶ್ರೀರಕ್ಷೆ ಇತ್ತು.ಆದ್ರೂ ಕೆಲ ಕಾರಣಗಳಿಂದ ಸೋಲು ಕಂಡಿದ್ದೇವೆ. ಇದು ನಮಗೆ ಮಾತ್ರವಲ್ಲ, ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಬೇಸರ, ನೋವು ತರಿಸಿದೆ. ಈ ನೋವಿನಲ್ಲಿ ನಮ್ಮ ಕುಟುಂಬವೂ ಇದೆ ಎಂದು ಅಮಿತ್ ಶಾ ಅವರಲ್ಲಿ ಹೇಳಿದರು.

ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡು ಆರೋಪ – ಪ್ರತ್ಯಾರೋಪ, ಸವಾಲಿಗೆ ಪ್ರತಿಸವಾಲು ಎದುರಾಗುತ್ತಿರುವ ಈ ಹೊತ್ತಿನಲ್ಲಿ ಸಿದ್ದೇಶ್ವರ ಕುಟುಂಬ ದೆಹಲಿಗೆ ಹೋಗಿ ಅಮಿತ್ ಶಾ ಭೇಟಿ ಮಾಡಿರುವುದರಿಂದ ಮುಂದೆ ಏನಾಗುತ್ತದೆ? ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಬೆಂಗಳೂರಿನಲ್ಲಿಯೂ ಕೇಂದ್ರ ಸರ್ಕಾರದ ನೂತನ ಸಚಿವರಾದ ವಿ. ಸೋಮಣ್ಣ, ಹೆಚ್. ಡಿ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟಾರೆ ದಾವಣಗೆರೆ ಬಿಜೆಪಿಯಲ್ಲಿ ಸೋಲಿನ ಕಿಚ್ಚು ಇನ್ನೂ ಆರಿಲ್ಲ. ಮುಂದೆ ಯಾವ ಸ್ವರೂಪ ಪಡೆಯುತ್ತದೆ ಇಲ್ಲವೇ ಸದ್ಯಕ್ಕೆ ತಣ್ಣಗಾಗುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment