ಬೆಂಗಳೂರು: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ‘ಬುರುಡೆ ಪ್ರಕರಣ’ (Dharmasthala Mass Burial Case) ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧದ ಪಿತೂರಿ ಆರೋಪಕ್ಕೆ ಸಂಬಂಧಿಸಿದಂತೆ ಈಗ ಅತ್ಯಂತ ಮಹತ್ವದ ತಿರುವು ಸಿಕ್ಕಿದೆ.
ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರ ಹೆಸರನ್ನು ಉಲ್ಲೇಖಿಸಿದ್ದು, ಇಡೀ ಪ್ರಕರಣಕ್ಕೆ ಹೊಸ ಆಯಾಮ ಲಭಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗುತ್ತಿದ್ದಂತೆ ನಟ ಪ್ರಕಾಶ್ ರಾಜ್ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಹೈಕೋರ್ಟ್ ಅರ್ಜಿಯಲ್ಲಿ ಏನಿದೆ?
ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಆರೋಪಿ ಚಿನ್ನಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. “ನನ್ನನ್ನು ಒತ್ತಾಯಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಸಲಿ ಸೂತ್ರಧಾರರು ಹೊರಗಿದ್ದಾರೆ” ಎಂದು ಆರೋಪಿಸಿರುವ ಆತ, ತನ್ನ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಪ್ರಸ್ತಾಪಿಸಿದ್ದಾನೆ. ಕೇರಳದ ರೆಸಾರ್ಟ್ ಒಂದರಲ್ಲಿ ತಂಗಿದ್ದಾಗ ಗಿರೀಶ್ ಮಟ್ಟಣ್ಣವರ್ ಅವರು ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ತನಗೆ ಫೋನ್ ನೀಡಿದ್ದರು. ಆಗ ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ, ಮಟ್ಟಣ್ಣವರ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಬೇಕು ಮತ್ತು ತಾವು 29ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದ್ದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ಗಂಭೀರವಾಗಿ ಆರೋಪಿಸಿದ್ದಾನೆ. ಅಲ್ಲದೆ, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಲಾಗಿತ್ತು ಮತ್ತು ಇಡೀ ಷಡ್ಯಂತ್ರಕ್ಕೆ 200 ಕೋಟಿ ರೂ. ಬಜೆಟ್ ಇತ್ತು ಎಂದು ಆತ ಉಲ್ಲೇಖಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿದೆ.
ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ:
ತಮ್ಮ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದ್ದಂತೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, “ಎಲ್ಲರಿಗೂ ನಮಸ್ಕಾರ.. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಲವು ಸುದ್ದಿಗಳು ಚರ್ಚೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದೊಂದು ಅತ್ಯಂತ ಸೂಕ್ಷ್ಮವಾದ ವಿಷಯ ಹಾಗೂ ಲಕ್ಷಾಂತರ ಭಕ್ತರ ನಂಬಿಕೆಗೆ ಸಾಕ್ಷಿಯಾಗಿರುವಂತದ್ದು. ಇಂತಹ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯ ಕೂಡ ಆಗಿದೆ” ಎಂದಿದ್ದಾರೆ.
ಮುಂದುವರಿದು, “ನಾನು ಸದ್ಯಕ್ಕೆ ದೂರದ ಊರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಖುದ್ದಾಗಿ ಬಂದು ಮಾಧ್ಯಮ ಮಿತ್ರರ ಮೂಲಕ ಇದಕ್ಕೆ ಉತ್ತರಿಸಲಿದ್ದೇನೆ. ಅಲ್ಲಿಯವರೆಗೆ ಕೆಲವು ದುಷ್ಟರು ಈ ಸುದ್ದಿಗೆ ರೆಕ್ಕೆಪುಕ್ಕ ಕಟ್ಟಿ ಹಬ್ಬಿಸುತ್ತಿರುವ ಸುಳ್ಳು ವದಂತಿಗಳನ್ನು ಯಾರೂ ನಂಬಬೇಡಿ” ಎಂದು ಮನವಿ ಮಾಡಿದ್ದಾರೆ. ಸದ್ಯ ಎಸ್‌ಐಟಿ ತನಿಖೆ ಎದುರಿಸುತ್ತಿರುವ ಈ ಹಳೆಯ ಪ್ರಕರಣಕ್ಕೆ ಈಗ ಪ್ರಕಾಶ್ ರಾಜ್ ಅವರ ಹೆಸರು ಸೇರ್ಪಡೆಯಾಗಿರುವುದು ರಾಜ್ಯ ರಾಜಕಾರಣ ಮತ್ತು ಸಿನಿಮಾ ರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ.
- Chinnayya writ petition
- Dharmasthala Burude case
- Dharmasthala mass burial case
- Girish Mattannavar
- Karnataka High Court SIT
- Karnataka Latest News
- Prakash Raj Dharmasthala case
- Prakash Raj Tamil call allegation
- Prakash Raj Twitter reaction
- Veerendra Heggade conspiracy case
- ಎಸ್‌ಐಟಿ ತನಿಖೆ
- ಕನ್ನಡ ಲೇಟೆಸ್ಟ್ ನ್ಯೂಸ್
- ಕರ್ನಾಟಕ ಹೈಕೋರ್ಟ್ ನೋಟಿಸ್
- ಗಿರೀಶ್ ಮಟ್ಟಣ್ಣವರ್
- ಚಿನ್ನಯ್ಯ ಹೈಕೋರ್ಟ್ ಅರ್ಜಿ
- ಧರ್ಮಸ್ಥಳ ಬುರುಡೆ ಪ್ರಕರಣ
- ಧರ್ಮಸ್ಥಳ ಮಾಸ್ ಬರಿಯಲ್ ಕೇಸ್
- ಪ್ರಕಾಶ್ ರಾಜ್
- ಪ್ರಕಾಶ್ ರಾಜ್ ಟ್ವೀಟ್ ಸ್ಪಷ್ಟನೆ
- ವೀರೇಂದ್ರ ಹೆಗ್ಗಡೆ ಷಡ್ಯಂತ್ರ





Leave a comment