SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಹರಿಹರ ತಾಲೂಕಿನ ಮಲೇಬೆನ್ನೂರು ಸಮೀಪದ ಕೊಕ್ಕನೂರು ಗ್ರಾಮದಲ್ಲಿ ವೃದ್ಧ ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿಯನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಕೊಕ್ಕನೂರು ಗ್ರಾಮದ ವೀರೇಶಚಾರಿ (38) ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 37 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, ಅಂದಾಜು ಬೆಲೆ 2,00,000 ರೂ ಬೆಲೆ ಬಾಳುವ ಮಾಂಗಲ್ಯ ಸರ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಜನವರಿ 26ರಂದು ಬೆಳಗಿನಜಾವ 5.45ರ ಸಮಯದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದ ಮಲ್ಲಮ್ಮ (60) ಅವರ ಕೊರಳಲ್ಲಿದ್ದ 37 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪಿಎಸ್ಐ ಪ್ರಭು ಡಿ. ಕೆಳಗಿನಮನಿ ನೇತೃತ್ವದಲ್ಲಿ ಆರೋಪಿ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅವರು ಕೊಕ್ಕನೂರು ಗ್ರಾಮಕ್ಕೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿ ಸಭೆಯಲ್ಲಿ ಆರೋಪಿತನನ್ನು ಪತ್ತೆ ಹಚ್ಚಿ ಪ್ರಕರಣದ ಬೇಧಿಸುತ್ತೆವೆ ಅಂತ ವಾಗ್ದಾನ ನೀಡಿದ ಕೆಲವೇ ದಿನಗಳಲ್ಲಿ ಆರೋಪಿ ಬಂಧಿಸಲಾಗಿದೆ.
ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐಗಳಾದ ಪ್ರಭು ಡಿ. ಕೆಳಗಿನಮನಿ, ಚಿದಾನಂದಪ್ಪ, ಸಿಬ್ಬಂದಿಯವರಾದ ಶಿವಕುಮಾರ್, ರಾಘವೇಂದ್ರ, ಮಲ್ಲಿಕಾರ್ಜುನ, ಪ್ರದೀಪ್, ನಾಗರಾಜ್, ಲಕ್ಷ್ಮಣ್, ವೀರೇಶ್, ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾದವ್ ಮತ್ತು ಜೀಪ್ ಚಾಲಕ ರಾಜಪ್ಪ ರವರ ತಂಡವು ಭೇದಿಸುವಲ್ಲಿ ಯಶಸ್ವಿಯಾಗಿದ್ದು ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ:
ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು, ಯುವತಿಯರು ಮನೆಯಿಂದ ಹೊರಗಡೆ ಸುತ್ತಾಡುವಾಗ ಸರಗಳ್ಳರ ಬಗ್ಗೆ ಎಚ್ಚರ ವಹಿಸಬೇಕು, ಅಪರಚಿತ ವ್ಯಕ್ತಿಗಳು ಅಡ್ರೆಸ್ ಕೇಳುವ, ಇತರೆ ಯಾವುದೇ ವಿಚಾರವನ್ನು ಇಟ್ಟುಕೊಂಡು ನಿಮ್ಮ ಬಳಿ ಮಾತಾನಾಡುವಾಗ ಅವರಿಂದ ಅಂತರ ಕಾಯ್ದುಕೊಳ್ಳಬೇಕು. ಒಂಟಿಯಾಗಿ ಓಡಾಡುವಾಗ ಆಭರಣಗಳ ಬಗ್ಗೆ ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ವಾಯು ವಿಹಾರಕ್ಕೆ ಒಡಾಡುವಾಗ ಒಬ್ಬೋಬ್ಬರೆ ಇರಬಾರದು. ಆಭರಣಗಳನ್ನು ಹೆಚ್ಚಾಗಿ ಧರಿಸದೇ ಇರುವುದು ಒಳಿತು. ಸರಗಳ್ಳತನವಾದರೆ, ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದೆ ಕೂಡಲೇ 112 ಕ್ಕೆ ಕರೆ ಮಾಡುವಂತೆ ಎಸ್ಪಿ ಉಮಾ ಪ್ರಶಾಂತ್ ಅವರು ತಿಳಿಸಿದ್ದಾರೆ.