ನವದೆಹಲಿ: ಚುನಾವಣಾ ಆಯೋಗದ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂಬೈನಿಂದ ದೆಹಲಿಗೆ ಆಗಮಿಸುತ್ತಿದ್ದ ಕಾಕ್‌ರೋಚ್ ಜನತಾ ಪಕ್ಷದ (CJP) ಸ್ಥಾಪಕ ಅಭಿಜಿತ್ ದಿಪ್ಕೆ ಅವರನ್ನು ದೆಹಲಿ ಪೊಲೀಸರು ವಿಮಾನದಲ್ಲೇ ನಾಟಕೀಯವಾಗಿ ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಅವರ ಕುಟುಂಬದಲ್ಲಿ ಖೇದಕರ ಸುದ್ದಿಯೊಂದು ವರದಿಯಾಗಿದ್ದು, ಅಭಿಜಿತ್ ದಿಪ್ಕೆ ಅವರ ಅಜ್ಜಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಿಧನರಾಗಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜೆಂಟರ್ ಮಂತರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಮುಂಬೈನಿಂದ ವಿಮಾನದಲ್ಲಿ ಬಂದಿಳಿದ ತಕ್ಷಣ ಏರ್ ಇಂಡಿಯಾ ವಿಮಾನದೊಳಗೆ ಪ್ರವೇಶಿಸಿದ ಮಹಿಳಾ ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿ, ಅಭಿಜಿತ್ ದಿಪ್ಕೆ ಹಾಗೂ ಇತರೆ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ವಶಕ್ಕೆ ಪಡೆದರು.
ಅಜ್ಜಿಯ ನಿಧನ ಹಾಗೂ ಪೊಲೀಸರ ಆಫರ್:
ಪೊಲೀಸರ ವಶದಲ್ಲಿರುವಾಗಲೇ ಅಭಿಜಿತ್ ದಿಪ್ಕೆ ಅವರಿಗೆ ಅವರ ಅಜ್ಜಿಯ ವಿಯೋಗದ ದುಃಖಕರ ಸುದ್ದಿ ತಿಳಿಸಲಾಗಿದೆ. ಮಾನವೀಯ ನೆಲೆಯಲ್ಲಿ ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಮಹಾರಾಷ್ಟ್ರದ ತಮ್ಮ ಸ್ವಗ್ರಾಮಕ್ಕೆ ವಿಮಾನದಲ್ಲಿ ತೆರಳಲು ಪೊಲೀಸರು ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಅವರಿಗೆ ತಿಳಿಸಲಾಗಿದೆ. ಪ್ರತಿಭಟನೆಯ ನೇತೃತ್ವವನ್ನು ಸದ್ಯ ಅಜಿಂಕ್ಯ ಶಿಂಡೆ ಅವರಿಗೆ ವಹಿಸಲಾಗಿದೆ.
Leave a comment