SUDDIKSHANA KANNADA NEWS/ DAVANAGERE/DATE:12_08_2025
ದಾವಣಗೆರೆ: ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಆದ್ರೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆಗಳು ಸಿಗುವುದು ಕಡಿಮೆ. ಇದು ಸಿಕ್ಕರೆ ಅತ್ಯುನ್ನತ ಸಾಧನೆ ಮಾಡಲು ಕಷ್ಟವಾಗದು ಎಂದು ಜಿಲ್ಲಾ ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಅಭಿಪ್ರಾಯಪಟ್ಟರು.
ಜವಾಹರ್ ಬಾಲ್ ಮಂಚ್ ವತಿಯಿಂದ ನಿಟುವಳ್ಳಿಯ ಇಎಸ್ಐ ಆಸ್ಪತ್ರೆ ಎದುರುಗಡೆ ಇರುವ ಸರ್ಕಾರಿ ಶಾಲೆಗೆ ಕ್ರೀಡಾ ಸಾಮಗ್ರಿ ಹಾಗೂ ವಿದ್ಯಾರ್ಥಿಗಳಿಗೆ ಟೀ ಶರ್ಟ್ ವಿತರಿಸಿದ ಬಳಿಕ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಆದ್ರೆ, ನಿಟುವಳ್ಳಿಯ ಸರ್ಕಾರಿ ಶಾಲೆ ಇದಕ್ಕೆ ತದ್ವಿರುದ್ಧ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ. ಮೂಲಭೂತ ಸೌಲಭ್ಯ ಇನ್ನೂ ಹೆಚ್ಚಿನ ರೀತಿಯಲ್ಲಿ ಸಿಗುವಂತಾಗಬೇಕು ಎಂದು ಹೇಳಿದರು.
READ ALSO THIS STORY: ಬಲಗೈ ಬಂಟನಂತಿದ್ದ ಕೆ. ಎನ್. ರಾಜಣ್ಣರನ್ನ ಸಿದ್ದರಾಮಯ್ಯ ಸಂಪುಟದಿಂದ ಕಿತ್ತು ಹಾಕಲು ಒಪ್ಪಿದ್ದೇಕೆ
ಪಠ್ಯ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಿಗೂ ಸೂಕ್ತ ಸೌಲಭ್ಯಗಳು ಸಿಗಬೇಕಿದೆ. ಖಾಸಗಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗಿಂತ ಕ್ರೀಡಾ ಚಟುವಟಿಕೆಗಳಲ್ಲಿ ಯಾವಾಗಲೂ ಸರ್ಕಾರಿ ಶಾಲೆಗಳ ಮಕ್ಕಳೇ ಮುಂದಿರುತ್ತಾರೆ. ಹಾಗಾಗಿ, ಶಾಲೆಗೆ ಕ್ರೀಡಾ ಸಾಮಗ್ರಿ ಮತ್ತು ವಿದ್ಯಾರ್ಥಿಗಳಿಗೆ ಟೀ ಶರ್ಟ್ ವಿತರಿಸಲಾಗುತ್ತಿದೆ. ಈ ಶಾಲೆಯಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ಓದಿದವರು ಹೆಚ್ಚಿನ ಸಾಧನೆ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಮಿನುಗುವ ನಕ್ಷತ್ರಗಳಾಗಲಿ ಎಂಬ ಆಶಯದಿಂದ ನಾವು ಟೀ ಶರ್ಟ್ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದೇವೆ. ಶಾಲೆಗೆ ಕ್ರೀಡಾ ಸಾಮಗ್ರಿ ಮತ್ತು ವಿದ್ಯಾರ್ಥಿಗಳಿಗೆ ಟೀ ಶರ್ಟ್ ನೀಡುವಂತೆ ದೈಹಿಕ ಶಿಕ್ಷಕರಾದ ದೇವರಾಜ್ ಅವರು ಮನವಿ ಮಾಡಿದ ಮೇರೆಗೆ ಕೈಯಲ್ಲಾದಷ್ಟು ಸಹಾಯ ಮಾಡಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಈ ಶಾಲೆ ನೋಡಿದರೆ ಖುಷಿಯಾಗುತ್ತದೆ. ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿ ಓದಿದವರು ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಇಂಥ ಶಾಲೆಗಳು ಉಳಿಯುವಂತಾಗಬೇಕು. ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿದರೆ ಶಾಲೆ ಮತ್ತಷ್ಟು ಉನ್ನತಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದು ಮೊಹಮ್ಮದ್ ಜಿಕ್ರಿಯಾ ಅವರು ಹೇಳಿದರು.
ಡಿಡಿಪಿಐ ಕೊಟ್ರೇಶ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಇಒ ಪುಷ್ಪಲತಾ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳ ಅನುಕೂಲಕ್ಕೆ ಸಹಾಯ ಮಾಡಿರುವುದು ತುಂಬಾ ಒಳ್ಳೆಯ ಕೆಲಸ. ಕ್ರೀಡಾ ಸಾಮಗ್ರಿಗಳು ಸಿಕ್ಕರೆ ಮಕ್ಕಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ. ಟೂರ್ನಮೆಂಟ್ ನಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಜವಾಹರ್ ಬಾಲ್ ಮಂಚ್ ನ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ನೇತೃತ್ವದಲ್ಲಿ ನೀಡಿರುವುದು ಮತ್ತೊಬ್ಬರಿಗೆ ಸ್ಫೂರ್ತಿ ತರುವುದಾಗಿದೆ ಎಂದು ಪ್ರಶಂಸಿಸಿದರು.
ಜವಾಹರ್ ಬಾಲ್ ಮಂಚ್ ಪದಾಧಿಕಾರಿಗಳಾದ ಕೆ. ಹೆಚ್. ಪ್ರೇಮಾ, ನಾಗರಾಜ್, ಫಯಾಜ್ ಅಹ್ಮದ್, ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್, ದೈಹಿಕ ಶಿಕ್ಷಕ ದೇವರಾಜ್, ಜಯಪ್ಪ, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಸಮಾರಂಭದಲ್ಲಿ ಹಾಜರಿದ್ದರು.