SUDDIKSHANA KANNADA NEWS/ DAVANAGERE/ DATE:10-11-2023
ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಶಾಮನೂರು ರಸ್ತೆಯಲ್ಲಿರುವ ಎಂ.ಬಿ.ಎ. ಇಂಡೋರ್ ಆಡಿಟೋರಿಯಮ್ ನಲ್ಲಿ ಏರ್ಪಡಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಗೆಲುವು ಅಸಾಧ್ಯವೇನಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮೈಮರೆಯಬಾರದು. ಮತ್ತೊಮ್ಮೆ ಬಿಜೆಪಿ ಗೆಲ್ಲದಂತೆ ಎಚ್ಚರ ವಹಿಸಿ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ರಾಜ್ಯದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಐದು ಗ್ಯಾರಂಟಿಗಳನ್ನು ನೀಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ. ಜೊತೆಗೆ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲಬಾರದು. ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಇದು ಅಸಾಧ್ಯ ಏನಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಈಗಾಗಲೇ ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದೆ. ರಾಜ್ಯದಲ್ಲಿ 136 ಶಾಸಕರು ಗೆಲ್ಲುವ ಮೂಲಕ ದಿಗ್ವಿಜಯ ಸಾಧಿಸಿದ್ದೇವೆ. ಇದೇ ಫಲಿತಾಂಶವು ಲೋಕಸಭೆ ಚುನಾವಣೆಯಲ್ಲಿಯೂ ಪುನರಾವರ್ತನೆಯಾಗಬೇಕು. ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಲೋಕಸಭೆಯಲ್ಲಿಯೂ ಕೆಲಸ ಮಾಡಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಜನರಿಗೆ ತಲುಪಬೇಕು. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಪ್ರಾಮಾಣಿಕವಾಗಿ ಕೆಲಸ ಮಾಡಿ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿ ಎಂದು ಶಾಮನೂರು ಶಿವಶಂಕರಪ್ಪ ಅವರು
ಕಿವಿಮಾತು ಹೇಳಿದರು.
ಅಭಿಪ್ರಾಯ ಸಂಗ್ರಹ:
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಡಿಸಿಸಿ ಅಧ್ಯಕ್ಷರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಸಭೆ ಪರಾಜಿತ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮುಂಚೂಣಿ ಘಟಕ, ಸೆಲ್, ವಿಭಾಗಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಉಪಾಧ್ಯಕ್ಷರು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಸಚಿವ ಈಶ್ವರ್ ಖಂಡ್ರೆ ಅವರು ಸಂಗ್ರಹಿಸಿದರು.
ಈ ಪೂರ್ವಭಾವಿ ಸಭೆಯಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಲತಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಾಜಿ ಶಾಸಕ ರಾಮಪ್ಪ, ಕಾಂಗ್ರೆಸ್ ಮುಖಂಡರಾದ ಮುದ್ದೇಗೌಡ್ರು ಗಿರೀಶ್,
ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್ ಮತ್ತಿತರರು ಹಾಜರಿದ್ದರು.