SUDDIKSHANA KANNADA NEWS/ DAVANAGERE/ DATE:15-10-2023
ದಾವಣಗೆರೆ (Davanagere): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕವು ಅ. 16ರಂದು ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಿದೆ. ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ.
READ ALSO THIS STORY:
Māyakonda: ಮತ್ತಿ ಗ್ರಾಮದ ಅಸ್ವಚ್ಛತೆಗೆ ಕೆ. ಎಸ್. ಬಸವಂತಪ್ಪ ಕೆಂಡಾಮಂಡಲ: ಅಧಿಕಾರಿಗಳ ಬೆಂಡೆತ್ತಿದ ಶಾಸಕ
ಬೆಳಿಗ್ಗೆ 11 ಗಂಟೆಗೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್, ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಎಸ್. ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಶಿವಯೋಗಿಸ್ವಾಮಿ, ಬಿಜೆಪಿ ಪದಾಧಿಕಾರಿಗಳು, ಮಾಜಿ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ತೆರಳಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ಬರ ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರ್ಕಾರ ವಿಫಲವಾಗಿರುವುದು ಅತ್ಯಂತ ಖಂಡನೀಯ . ರಾಜ್ಯದಲ್ಲಿ ಇಂದು ವಿದ್ಯುತ್ ಕ್ಷಾಮ ಎದುರಾಗಿದೆ.. ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಅನ್ನು ಪುತಿದಿನ ಎರಡರಿಂದ ಮೂರು ಗಂಟೆ ನೀಡುವಂತಹ ದುಸ್ಥಿತಿಗೆ ಬಂದಿರುವುದು ರಾಜ್ಯ ಸರ್ಕಾರದ ಅಸಮರ್ಪಕ ನಿರ್ವಹಣೆಗೆ ಸಾಕ್ಷಿ. ತಾನೇ ಘೋಷಿಸಿದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ವಿಫಲವಾಗಿದೆ. ಐದನೇ ಗ್ಯಾರಂಟಿ ಯುವನಿಧಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿಟ್ಟಿದ್ದ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ನಾಡಿನ ಜನರ ಹಿತಾಸಕ್ತಿ ಕಡೆಗಣಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಅಸಮರ್ಪಕ ಕಾರ್ಯ ವೈಖರಿಯ ಪರಿಣಾಮ ರಾಜ್ಯದ ಜನಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ವಿವಿಧ ವರ್ಗಗಳು ಪ್ರತಿಭಟನೆಯ ಹಾದಿ ತುಳಿಯುತ್ತಿವೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ. ಬೇಸಿಗೆಯ ದಿನಗಳಲ್ಲಿ ಬರುತ್ತಿದ್ದ ಬರ ಪರಿಸ್ಥಿತಿ ಇಂದು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಬಂದಿರುವುದು ಶೋಚನೀಯ ಎಂದು ಹೇಳಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಆಗಮಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್ ಮನವಿ ಮಾಡಿದ್ದಾರೆ.