SUDDIKSHANA KANNADA NEWS/ DAVANAGERE/ DATE:12-10-2023
ದಾವಣಗೆರೆ (Davanagere): ಕರ್ನಾಟಕ ರಾಜ್ಯ ಉದಯಿಸಿ 50 ವರ್ಷಗಳನ್ನು ಪೂರೈಸುತ್ತಿದ್ದು ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಸಾಂಪ್ರದಾಯಿಕ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲಾ ಇಲಾಖೆಗಳು ಸನ್ನದ್ದವಾಗಬೇಕೆಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
READ ALSO THIS STORY:
BIG BREAKING: ಭದ್ರಾ ಅಚ್ಚುಕಟ್ಟುದಾರ ಪ್ರದೇಶದವರಿಗೆ ಸಿಗಲಿದೆ ಭದ್ರಾ ಡ್ಯಾಂ (Bhadra Dam) ನೀರು, ಡಿಕೆಶಿ ಭೇಟಿ ಮಾಡಿದ ಸಿದ್ದೇಶ್ವರ ನೇತೃತ್ವದ ನಿಯೋಗ: ನೂರು ದಿನಗಳ ಕಾಲ ಹರಿಯಲಿದೆ ಭದ್ರಾ ನೀರು
ಅವರು ಇಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣಾ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಎಂದು ಹೆಸರನ್ನು ಮರುನಾಮಕರಣ ಮಾಡಿ ನವಂಬರ್ 1 ಕ್ಕೆ 50 ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ ಈ ವರ್ಷ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ನವಂಬರ್ 1 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಇರುತ್ತದೆ. ಇದಕ್ಕೂ ಮೊದಲು ಬೆಳಗ್ಗೆ ಪಾಲಿಕೆಯಿಂದ ಕ್ರೀಡಾಂಗಣದವರೆಗೆ ವಿವಿಧ ಕಲಾತಂಡಗಳೊಂದಿಗೆ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಕನ್ನಡಪರ ಎಲ್ಲಾ ಸಂಘಟನೆಗಳು ಭಾಗವಹಿಸಬೇಕೆಂದರು.
ಸಾಧಕರಿಗೆ ಸನ್ಮಾನ:
ಕ್ರೀಡೆ, ಭಾಷೆ, ನಾಡುನುಡಿಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರಿಗೆ ಪ್ರತಿ ತಾಲ್ಲೂಕಿನಿಂದ ಇಬ್ಬರನ್ನು ಆಯ್ಕೆ ಮಾಡಿ ರಾಜ್ಯೋತ್ಸವದ ವೇಳೆ ಸನ್ಮಾನಿಸಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿಯು ಆಯಾ ತಾಲ್ಲೂಕಿನಲ್ಲಿನ ಸಾಧಕರನ್ನು ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಇವರ ಆಯ್ಕೆಗೆ ದಾವಣಗೆರೆ ಹಾಗೂ ಹೊನ್ನಾಳಿ ಎಸಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತದೆ ಎಂದರು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ:
ರಾಜ್ಯೋತ್ಸವ ಅಂಗವಾಗಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕುವೆಂಪು ಕನ್ನಡ ಭವನ ಅಥವಾ ಚಿತ್ರಕಲಾ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರವಾಸಿಗರು ಹೆಚ್ಚು ಬರುವುದರಿಂದ ಅಂದು ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗ್ಲಾಸ್ ಹೌಸ್ನಲ್ಲಿಯು ಆಯೋಜಿಸಲಾಗುತ್ತದೆ ಎಂದರು.
ಕನ್ನಡ ಚಲನಚಿತ್ರ ಪ್ರದರ್ಶನ, ಕನ್ನಡ ನಾಮಫಲಕ; ರಾಜ್ಯೋತ್ಸವದ ಅಂಗವಾಗಿ ಚಲನಚಿತ್ರ ಮಂದಿರಗಳಲ್ಲಿ ಒಂದು ವಾರಗಳ ಕಾಲ ಕನ್ನಡ ಚಲನಚಿತ್ರ ಪ್ರದರ್ಶನ ಏರ್ಪಡಿಸಬೇಕೆಂದು ಸಂಘಟನೆಗಳ ಅಪೇಕ್ಷೆಯಾಗಿದ್ದು ಒಂದು ವಾರಗಳ ಕಾಲ ಕನ್ನಡ ಚಲನಚಿತ್ರಗಳನ್ನು ಪ್ರದರ್ಶನ ಮಾಡಲು ಚಿತ್ರಮಂದಿರಗಳಿಗೆ ಸೂಚನೆ ನೀಡಲಾಗುತ್ತದೆ. ಮತ್ತು ಅಂಗಡಿ, ಸಂಘ, ಸಂಸ್ಥೆಗಳ ನಾಮಫಲಕ ಕನ್ನಡದಲ್ಲಿರುವುದು ಕಡ್ಡಾಯವಾಗಿದ್ದು ಇವುಗಳ ಪರಿಶೀಲನೆಯನ್ನು ಮಾಡಲು ಪಾಲಿಕೆ, ಕಾರ್ಮಿಕ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಮತ್ತು ಅದ್ದೂರಿಯಾಗಿ ಆಚರಣೆ ಮಾಡಲು ತಮ್ಮ ಸಲಹೆಗಳನ್ನು ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿ ರಾಮಗೊಂಡ ಬಸರಗಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು.