
ಗುವಾಹಟಿ: ಅಸ್ಸಾಂ ರಾಜ್ಯ ಸಚಿವಾಲಯವಾದ ‘ಜನತಾ ಭವನ’ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಹೊಸ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದೆ. ಕಚೇರಿ ಸಮಯದಲ್ಲಿ ಮತ್ತು ಅಧಿಕೃತ ಕಾರ್ಯಕ್ರಮಗಳ ವೇಳೆ ಜೀನ್ಸ್, ಟಿ-ಶರ್ಟ್ ಮತ್ತು ಚಪ್ಪಲಿಗಳನ್ನು ಧರಿಸುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿ ಸಾಮಾನ್ಯ ಆಡಳಿತ ಇಲಾಖೆಯು ಆದೇಶ ಹೊರಡಿಸಿದೆ.
ಕೆಲವು ಅಧಿಕಾರಿಗಳು ಕರ್ತವ್ಯದಲ್ಲಿದ್ದಾಗ ಅನುಚಿತ ಉಡುಪುಗಳನ್ನು ಧರಿಸುತ್ತಿರುವುದರಿಂದ ಸರ್ಕಾರಿ ನೌಕರರ ಸಾರ್ವಜನಿಕ ಘನತೆಗೆ ಧಕ್ಕೆಯಾಗುತ್ತಿದೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಶಿಸ್ತು, ಸಭ್ಯತೆ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಹುದ್ದೆಯ ಭೇದವಿಲ್ಲದೆ ಎಲ್ಲಾ ಸಚಿವಾಲಯದ ಅಧಿಕಾರಿಗಳಿಗೆ ಈ ನಿಯಮವನ್ನು ಅನ್ವಯಿಸಲಾಗಿದೆ.
ಯಾವ ಉಡುಪುಗಳಿಗೆ ಅವಕಾಶ?: ಉಪ ಕಾರ್ಯದರ್ಶಿ ಮಾನಶ್ ಜ್ಯೋತಿ ಬರುವಾ ಅವರ ಸಹಿ ಹೊಂದಿರುವ ಸುತ್ತೋಲೆಯ ಪ್ರಕಾರ, ಪುರುಷ ನೌಕರರು ಫಾರ್ಮಲ್ ಪ್ಯಾಂಟ್-ಶರ್ಟ್ ಅಥವಾ ಕುರ್ತಾ, ಧೋತಿ ಮತ್ತು ಪೈಜಾಮದಂತಹ ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಬಹುದು. ಮಹಿಳೆಯರು ಸಲ್ವಾರ್ ಸೂಟ್, ಸೀರೆ ಅಥವಾ ಅಸ್ಸಾಂನ ಸಾಂಪ್ರದಾಯಿಕ ‘ಮೆಖೇಲಾ-ಚಾದರ್’ ಧರಿಸಲು ಸೂಚಿಸಲಾಗಿದೆ.
ನಿಷೇಧಿತ ಉಡುಪುಗಳು: ಜೀನ್ಸ್ ಮತ್ತು ಟಿ-ಶರ್ಟ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಹಿಳೆಯರು ಟ್ಯೂನಿಕ್ಸ್ ಮತ್ತು ಲೆಗ್ಗಿಂಗ್ಸ್ ಧರಿಸುವುದನ್ನು ತಪ್ಪಿಸಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, ಆಡಂಬರದ ಬಟ್ಟೆಗಳು, ಪಾರ್ಟಿವೇರ್ ಹಾಗೂ ಕಚೇರಿಗೆ ಸೂಕ್ತವಲ್ಲದ ಸ್ಲಿಪ್ಪರ್ಗಳಿಗೆ ನಿರ್ಬಂಧ ಹೇರಲಾಗಿದೆ.
ತರಬೇತಿ ಕಾರ್ಯಕ್ರಮಗಳಿಗೂ ಅನ್ವಯ: ಸಚಿವಾಲಯದ ತರಬೇತಿ ಶಾಲೆ, ಅಸ್ಸಾಂ ಆಡಳಿತಾತ್ಮಕ ಸಿಬ್ಬಂದಿ ಕಾಲೇಜು ಮತ್ತು ಇತರ ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ನಡೆಯುವ ಸಭೆಗಳಿಗೂ ಈ ನಿಯಮ ಅನ್ವಯವಾಗಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.




