
ಬೀಜಿಂಗ್: ಎನ್ವಿಡಿಯಾ ಮುಖ್ಯ ಕಾರ್ಯನಿರ್ವಾಹಕ ಜೆನ್ಸೆನ್ ಹುವಾಂಗ್ ಅವರೊಂದಿಗೆ ನಂಟು ಹೊಂದಿರುವ ಚೀನಾದ ಉದ್ಯಮಿ ಆಲಿಸ್ ಹುವಾಂಗ್ಗೆ ಸಂಬಂಧಿಸಿದ ಕಂಪನಿಗಳು ಚೀನಾದ ಪ್ರಮುಖ AI ಡೇಟಾ ಸೆಂಟರ್ಗಳಿಗಾಗಿ ಕೋಟ್ಯಂತರ ಮೌಲ್ಯದ ಶಕ್ತಿಶಾಲಿ ಕಂಪ್ಯೂಟಿಂಗ್ ಉಪಕರಣಗಳನ್ನು ಧನಸಹಾಯದ ಮೂಲಕ ಪಡೆದಿರುವುದು ರಾಯ್ಸ್ ವರದಿ ಮೂಲಕ ಬಹಿರಂಗವಾಗಿದೆ.
ಚೀನಾದ ಕೇಂದ್ರ ಬ್ಯಾಂಕ್ನ ಕ್ರೆಡಿಟ್ ರಿಜಿಸ್ಟ್ರಿ ದಾಖಲೆಗಳ ಪ್ರಕಾರ, $270 ಮಿಲಿಯನ್ ಮೌಲ್ಯದ 764 AI ಸರ್ವರ್ಗಳು ಹಾಗೂ ದೊಡ್ಡ ಪ್ರಮಾಣದ ಕಂಪ್ಯೂಟಿಂಗ್ ನೆಟ್ವರ್ಕ್ಗಳನ್ನು ಬೆಂಬಲಿಸುವ $31 ಮಿಲಿಯನ್ ಮೌಲ್ಯದ ಉಪಕರಣಗಳನ್ನು ಸಾಲ ಪಡೆಯಲು ಅಡಮಾನ ಇಡಲಾಗಿದೆ.
ಚೀನಾದ ಟೆಕ್ ದಿಗ್ಗಜ ಟೆನ್ಸೆಂಟ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಶಾಂಘೈ ಡೇಟಾ ಸೆಂಟರ್ ಸೇರಿದಂತೆ ವಿವಿಧೆಡೆ ಈ ಹಾರ್ಡ್ವೇರ್ಗಳನ್ನು ಬಳಸಲಾಗಿದೆ. ಅಮೆರಿಕ ಸರ್ಕಾರವು ಸುಧಾರಿತ ಪ್ರೊಸೆಸರ್ಗಳ ರಫ್ತು ಮೇಲೆ ನಿಷೇಧ ಹೇರಿರುವ ಈ ಸಂದರ್ಭದಲ್ಲಿ, ಚೀನಾದ ಕಂಪನಿಗಳು ದುಬಾರಿ AI ತಂತ್ರಜ್ಞಾನದ ಮೂಲಸೌಕರ್ಯಗಳನ್ನು ಹೇಗೆ ಹಣಕಾಸು ವ್ಯವಸ್ಥೆಯ ಮೂಲಕ ಪಡೆದುಕೊಳ್ಳುತ್ತಿವೆ ಎಂಬುದನ್ನು ಈ ದಾಖಲೆಗಳು ಬಹಿರಂಗಪಡಿಸಿವೆ.
ಆಲಿಸ್ ಹುವಾಂಗ್ ನಿಯಂತ್ರಿಸುತ್ತಿದ್ದ ‘ಮೆಗಾಸ್ಪೀಡ್’ ಕಂಪನಿಯನ್ನು ಅಮೆರಿಕ ವಾಣಿಜ್ಯ ಇಲಾಖೆಯು ಈಗಾಗಲೇ ತನ್ನ ಕಪ್ಪುಪಟ್ಟಿಗೆ ಸೇರಿಸಿದೆ.
ಬೃಹತ್ ಹಣಕಾಸು ವ್ಯವಹಾರ: ಚೀನಾದ ಕೇಂದ್ರ ಬ್ಯಾಂಕ್ ದಾಖಲೆಗಳ ಪ್ರಕಾರ, ಆಲಿಸ್ ಹುವಾಂಗ್ಗೆ ಸಂಬಂಧಿಸಿದ ಕಂಪನಿಗಳು $270 ಮಿಲಿಯನ್ ಮೌಲ್ಯದ 764 ಶಕ್ತಿಶಾಲಿ AI ಸರ್ವರ್ಗಳು ಮತ್ತು ಮಾಡ್ಯೂಲ್ಗಳಿಗೆ ಹಣಕಾಸು ಒದಗಿಸಿವೆ.
ಶಾಂಘೈ ಡೇಟಾ ಸೆಂಟರ್ ನಂಟು: ಈ ಬಹುತೇಕ ಹಾರ್ಡ್ವೇರ್ಗಳನ್ನು ಶಾಂಘೈನಲ್ಲಿರುವ ಯಾಂಗ್ಟ್ಜಿ ರಿವರ್ ಡೆಲ್ಟಾ AI ಸೂಪರ್ಕಂಪ್ಯೂಟಿಂಗ್ ಸೆಂಟರ್ನಲ್ಲಿ ಇರಿಸಲಾಗಿದೆ ಎಂದು ದಾಖಲೆಗಳು ತೋರಿಸಿವೆ.
ಅಮೆರಿಕದ ನಿರ್ಬಂಧಗಳ ಮಧ್ಯೆಯೂ ಸವಾಲು: ಅಮೆರಿಕದ ಕಠಿಣ ತಂತ್ರಜ್ಞಾನ ರಫ್ತು ನಿಷೇಧದ ನಡುವೆಯೂ ಚೀನಾದ AI ಉದ್ಯಮವು ಹಣಕಾಸು ಸಾಲದ ಮೂಲಕ ಅಗತ್ಯ ಉಪಕರಣಗಳನ್ನು ಸಂಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ.
ದಾಖಲೆಗಳಲ್ಲಿರುವ ಸರ್ವರ್ಗಳಲ್ಲಿ ರಫ್ತು ನಿಷೇಧಿತ ಚಿಪ್ಗಳನ್ನು ಬಳಸಲಾಗಿದೆಯೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲದಿದ್ದರೂ, ಆಲಿಸ್ ಹುವಾಂಗ್ ಕುಟುಂಬ ಮತ್ತು ಅವರ ಸಹಚರರ ಒಡೆತನದ ಸಂಸ್ಥೆಗಳು ಚೀನಾದ AI ಉದ್ಯಮಕ್ಕೆ ಬಲ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.




