
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳಿಗೆ ಸಂಬಂಧಿಸಿದ ಪೋಸ್ಟ್ಗಳು ಹಾಗೂ ಸಾಮಾಜಿಕ ಜಾಲತಾಣದ ಖಾತೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಕಾಂಗ್ರೆಸ್ ನಿಯೋಗ ಹಾಗೂ ಮೆಟಾ ನೀತಿ ನಿರೂಪಣಾ ತಂಡದ ನಡುವೆ ಮಹತ್ವದ ಸಭೆ ನಡೆದಿದೆ. ತಾವು ಭಾರತದ ಕಾನೂನುಗಳಿಗೆ ಬದ್ಧವಾಗಿ ಪಾರದರ್ಶಕ ನೀತಿಗಳನ್ನು ಅನುಸರಿಸುತ್ತಿದ್ದೇವೆ ಎಂದು ಮೆಟಾ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಾಗೂ ಭಾರತೀಯ ಯೂತ್ ಕಾಂಗ್ರೆಸ್ ಮುಖಂಡರು ಮೆಟಾ ವಿರುದ್ಧ ಆಕ್ರೋಶದ ಹಿನ್ನೆಲೆಯಲ್ಲಿ, ಗುರುಗ್ರಾಮ್, ಹೈದರಾಬಾದ್ ಮತ್ತು ಮುಂಬೈನಲ್ಲಿರುವ ಮೆಟಾ ಕಚೇರಿಗಳ ಮುಂದೆ ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದರು. ಏಳು ದಿನಗಳ ಗಡುವು ನೀಡಿದ್ದ ಪ್ರತಿಭಟನಾಕಾರರು, ಸರ್ಕಾರದ ಆದೇಶದ ಮೇರೆಗೆ ಕಳೆದ ಆರು ತಿಂಗಳಲ್ಲಿ ಎಷ್ಟು ಭಾರತೀಯ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂಬ ಸಂಪೂರ್ಣ ವಿವರಣೆ ನೀಡುವಂತೆ ಆಗ್ರಹಿಸಿದ್ದರು.
ಕಾಂಗ್ರೆಸ್ ನಿಯೋಗದಿಂದ ಸಾಕ್ಷ್ಯ ಸಲ್ಲಿಕೆ: ಸಭೆಯ ವೇಳೆ ಕಾಂಗ್ರೆಸ್ ನಿಯೋಗವು ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸುವ ಪೋಸ್ಟ್ಗಳು ಮತ್ತು ನರೇಂದ್ರ ಮೋದಿ ಸರ್ಕಾರದ ವಿರುದ್ಧದ ವಿಮರ್ಶಾತ್ಮಕ ಪೋಸ್ಟ್ಗಳನ್ನು ವ್ಯವಸ್ಥಿತವಾಗಿ ನಿರ್ಬಂಧಿಸಲಾಗುತ್ತಿದೆ ಎಂಬುದಕ್ಕೆ ಸಾಕ್ಷ್ಯಗಳನ್ನು ಮೆಟಾ ತಂಡಕ್ಕೆ ಸಲ್ಲಿಸಿದೆ.
ಮೆಟಾ ಸ್ಪಷ್ಟನೆ: ಎಲ್ಲಾ ಆರೋಪಗಳನ್ನು ಆಲಿಸಿದ ಮೆಟಾ ನೀತಿ ತಂಡವು, ಕಂಪನಿಯು ಕಟ್ಟುನಿಟ್ಟಾಗಿ ಭಾರತೀಯ ಕಾನೂನುಗಳನ್ನು ಗೌರವಿಸುತ್ತದೆ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಯೂತ್ ಕಾಂಗ್ರೆಸ್ ಎಚ್ಚರಿಕೆ ಹಾಗೂ ಬ್ಯಾನರ್ ಅಭಿಯಾನ: ಮೆಟಾ ತಕ್ಷಣವೇ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್ಗಳ ಖಾತೆ ಮೇಲಿನ ಅಕ್ರಮ ನಿರ್ಬಂಧವನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ IYC ಎಚ್ಚರಿಸಿದೆ. ಇದರ ನಡುವೆ ಬೆಂಗಳೂರಿನಲ್ಲಿ ಮೆಟಾ ವಿರುದ್ಧ ವಿವಾದಾತ್ಮಕ ಹೋರ್ಡಿಂಗ್ಗಳನ್ನು ಅಳವಡಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳ ನಡುವಿನ ಬಿಕ್ಕಟ್ಟು ಹಾಗೂ ವಾಕ್ಸ್ವಾತಂತ್ರ್ಯದ ಮೇಲಿನ ಹತೋಟಿ ಕುರಿತ ಚರ್ಚೆ ಇದೀಗ ರಾಷ್ಟ್ರಮಟ್ಟದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.




