Home ದಾವಣಗೆರೆ ರಕ್ತದಾನಕ್ಕೆ ಸ್ಪೂರ್ತಿ ತುಂಬಿದ ಜಿ. ಮಲ್ಲಿಕಾರ್ಜುನಪ್ಪ ಮತ್ತು ಜಿ.ಎಂ. ಹಾಲಮ್ಮ ಪುಣ್ಯ ಸ್ಮರಣೆಯ ವಿಶೇಷ ರಕ್ತದಾನ ಶಿಬಿರ
ದಾವಣಗೆರೆನವದೆಹಲಿಬೆಂಗಳೂರು

ರಕ್ತದಾನಕ್ಕೆ ಸ್ಪೂರ್ತಿ ತುಂಬಿದ ಜಿ. ಮಲ್ಲಿಕಾರ್ಜುನಪ್ಪ ಮತ್ತು ಜಿ.ಎಂ. ಹಾಲಮ್ಮ ಪುಣ್ಯ ಸ್ಮರಣೆಯ ವಿಶೇಷ ರಕ್ತದಾನ ಶಿಬಿರ

Share
ರಕ್ತದಾನ
Share

ದಾವಣಗೆರೆ: ರಕ್ತದಾನ ಮತ್ತು ಅಂಗಾಂಗ ದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು. ಇದು ಕೇವಲ ಒಂದು ದಾನವಲ್ಲ, ಅದು ಮತ್ತೊಬ್ಬರಿಗೆ ಬದುಕುವ ಅವಕಾಶವನ್ನು ನೀಡುವ ಮಹತ್ಕಾರ್ಯವಾಗಿದೆ ಎಂದು ಮಾಜಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ನಗರದ ಪಿ.ಬಿ. ರಸ್ತೆಯಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ದಿ|| ಶ್ರೀ ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಜಿ.ಎಂ. ಹಾಲಮ್ಮ ಇವರ ಪುಣ್ಯ ಸ್ಮರಣೆ ನಿಮಿತ್ತ ಇದೇ ನವೆಂಬರ್ 25,2026ನೇ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ನಮ್ಮ ತಂದೆ ಜಿ. ಮಲ್ಲಿಕಾರ್ಜುನಪ್ಪ ಮತ್ತು ತಾಯಿ ಜಿ.ಎಂ. ಹಾಲಮ್ಮ ಅವರುಗಳ ಪುಣ್ಯ ಸ್ಮರಣಾರ್ಥಕವಾಗಿ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಆ ಮೂಲಕ ಅಮೂಲ್ಯ ಜೀವಗಳ ಉಳಿಸುವಲ್ಲಿ ನಮ್ಮದೊಂದು ಪಾತ್ರವೂ ಇದಾಗಿದೆ. ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಿದರೆ 15 ದಿನಗಳಲ್ಲಿ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ. ಇಂದು ವೈದ್ಯಕೀಯ ವಿಜ್ಞಾನ ಬಹಳ ಮುಂದುವರೆದಿದೆ. ದಾನ ಪಡೆದ ರಕ್ತವನ್ನು ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟ್‌ಲೆಟ್‌ಗಳಾಗಿ ವಿಂಗಡಿಸಿ ಒಂದು ಯೂನಿಟ್ ರಕ್ತವನ್ನು ನಾಲ್ಕೈದು ಜನರಿಗೆ ಬಳಸಲಾಗುತ್ತಿದೆ. ಅಪಘಾತ ಅಥವಾ ಬ್ರೈನ್ ಡೆಡ್ ಆದ ಸಂದರ್ಭಗಳಲ್ಲಿ ಕುಟುಂಬಸ್ಥರು ಮುಂದೆ ಬಂದು ಹೃದಯ, ಕಿಡ್ನಿ, ಶ್ವಾಸಕೋಶ ಹಾಗೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಹಲವರ ಪ್ರಾಣ ಉಳಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ಉದ್ಯೋಗ ಅರಸುವವರಾಗದೆ, ಸ್ವಂತ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು. “ನಾವು ಈಗಾಗಲೇ 5,000 ಜನರಿಗೆ ಉದ್ಯೋಗ ನೀಡಿದ್ದು, ಮುಂದೆ 10,000 ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದೇವೆ. ನೀವೂ ಕೂಡ ಸ್ವಾವಲಂಬಿಗಳಾಗಿ ಸಮಾಜಕ್ಕೆ ಆಸರೆಯಾಗಬೇಕು” ಎಂದು ಸಲಹೆ ನೀಡಿದರು.

ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದಿದ್ದರೂ ಕೃತಕ ಕಿಡ್ನಿ ಅಥವಾ ಹೃದಯವನ್ನು ಜೋಡಿಸಬಹುದೇ ಹೊರತು, ಕೃತಕ ರಕ್ತವನ್ನು ಉತ್ಪಾದಿಸಲು ಇಂದಿಗೂ ಸಾಧ್ಯವಾಗಿಲ್ಲ. ಆದ್ದರಿಂದ ಯುವಜನತೆ ಮತ್ತು ಸಂಘ-ಸಂಸ್ಥೆಗಳು ವರ್ಷಕ್ಕೆ ಎರಡು ಬಾರಿಯಾದರೂ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡ ರೋಗಿಗಳ ಪ್ರಾಣ ಉಳಿಸಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಮಧುಸೂದನ್ ಮಾತನಾಡಿ, ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಹೆರಿಗೆ ಸಮಯದ ತೊಂದರೆಗೊಳಗಾಗುವ ಮಹಿಳೆಯರು ಮತ್ತು ಅಪಘಾತದ ಗಾಯಾಳುಗಳ ಚಿಕಿತ್ಸೆಗಾಗಿ ಪ್ರತಿ ತಿಂಗಳು ಸುಮಾರು 900 ಯೂನಿಟ್ ರಕ್ತ ಬಳಕೆಯಾಗುತ್ತದೆ. ಇತರೆ ಖಾಸಗಿ ರಕ್ತನಿಧಿಗಳ 300 ಯೂನಿಟ್ ಸೇರಿದಂತೆ ಜಿಲ್ಲೆಗೆ ಒಟ್ಟು 1,200 ಯೂನಿಟ್ ರಕ್ತದ ಅವಶ್ಯಕತೆಯಿದೆ. ಸಂಗ್ರಹಿಸಿದ ಒಂದು ಯೂನಿಟ್ ರಕ್ತವನ್ನು (450 ಎಂ.ಎಲ್) 35 ರಿಂದ ಗರಿಷ್ಠ 42 ದಿನಗಳವರೆಗೆ ಮಾತ್ರ ಸಂರಕ್ಷಿಸಿಡಲು ಸಾಧ್ಯ. ಜಿಲ್ಲೆಯಲ್ಲಿ ದೀರ್ಘಕಾಲ ರಕ್ತವನ್ನು ಫ್ರೀಜ್ ಮಾಡಿ ಇಡುವ ವ್ಯವಸ್ಥೆ ಇಲ್ಲದ ಕಾರಣ, ನಿರಂತರ ಶಿಬಿರಗಳ ಅಗತ್ಯವಿದೆ. ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ (42 ದಿನಗಳವರೆಗೆ) ಯಾವುದೇ ಶುಲ್ಕ ಅಥವಾ ಬದಲಿ ರಕ್ತದ ಷರತ್ತಿಲ್ಲದೆ ಉಚಿತವಾಗಿ ರಕ್ತ ನೀಡಲಾಗುತ್ತಿದೆ. ಪುಣ್ಯಸ್ಮರಣೆ ನಿಮಿತ್ತ ವರ್ಷಕ್ಕೊಮ್ಮೆ ಬದಲಾಗಿ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ಜಿ.ಎಂ. ಸಿದ್ದೇಶ್ವರ ಅವರಿಗೆ ಮನವಿ ಮಾಡಿದರು.

ಜಿ.ಎಂ. ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಡಾ. ಹೆಚ್.ಆರ್. ಮಹದೇವಸ್ವಾಮಿ ಮಾತನಾಡಿ, ವಿಶ್ವವಿದ್ಯಾಲಯಗಳು ಕೇವಲ ಜ್ಞಾನವನ್ನು ಹಂಚುವ ಕೇಂದ್ರಗಳಾಗದೆ, ಮಾನವೀಯತೆಯನ್ನು ಹಂಚುವ ತಾಣಗಳಾಗಬೇಕು. ಒಂದು ಹನಿ ರಕ್ತವು ಮತ್ತೊಂದು ಕುಟುಂಬದಲ್ಲಿ ಸಂತೋಷವನ್ನು ಮರಳಿ ತರಬಲ್ಲದು ಮತ್ತು ಒಬ್ಬ ರಕ್ತದಾನಿ ಯಾರೋ ಒಬ್ಬರ ಜೀವನದಲ್ಲಿ ಆಶಾಕಿರಣವಾಗಬಲ್ಲರು ಎಂದು ಹೇಳಿದರು.

ಜಿ.ಎಂ. ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಘಟಕ ಹಾಗೂ ಜಿ. ಮಲ್ಲಿಕಾರ್ಜುನಪ್ಪ – ಹಾಲಮ್ಮ ಚಾರಿಟಿ ಫೌಂಡೇಶನ್, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ, ಲಯನ್ಸ್ ಸಂಸ್ಥೆ, ರೆಡ್ ಕ್ರಾಸ್ ಸೇರಿದಂತೆ ವಿವಿಧ ಸಂಸ್ಥೆಗಳು ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಜಿಎಂಐಟಿ ಕಟ್ಟಡ, ನ್ಯೂ ಅಕಾಡೆಮಿ ಬ್ಲಾಕ್ ಮತ್ತು ಕೇಂದ್ರ ಗ್ರಂಥಾಲಯದಲ್ಲಿ ಈ ರಕ್ತದಾನ ಶಿಬಿರ ನಡೆಯಿತು. ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಸ್ವಯಂ ಪ್ರೇರಿತರಾಗಿ ದಾನಿಗಳು ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳ ಉಳಿವಿಕೆಗೆ ಸಾಕ್ಷಿಯಾದರು.

ಜಿ.ಎಂ. ಗ್ರೂಪ್‌ ನ ಎಕ್ಸಿಕ್ಯೂಟೀವ್‌ ಡೈರೆಕ್ಟರ್‌ ಜಿ.ಎಲ್. ರಾಜೀವ್, ಸಹ ಉಪಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್‌ ಬೋಳಕಟ್ಟಿ, ಜಿಎಂ ಹಾಲಮ್ಮ ಪದವಿ ಪೂರ್ವ ಕಾಲೇಜಿನ ಎಎಓ ಜಿ.ಜೆ. ಶಿವಕುಮಾರ್‌, ಲಯನ್ಸ್ ರಕ್ತನಿಧಿ ಕೇಂದ್ರದ ಸಂಸ್ಥಾಪಕ ಲ. ಮೌನೇಶ್ವರ ಎನ್.ಹೆಚ್., ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಲ. ಹೆಚ್.ಎನ್. ಶಿವಕುಮಾರ್, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತ ಕೇಂದ್ರ ವೈದ್ಯಾಧಿಕಾರಿ ಡಾ. ಗೀತಾ ಡಿ.ಹೆಚ್, ಹೆಚ್‌ಡಿಎಫ್‌ಸಿ ಬ್ಯಾಂಕ್ (ದಾವಣಗೆರೆ) ಕ್ಲಸ್ಟರ್‌ ಹೆಡ್‌ ವಿನಾಯಕ ಮೋರಡ್‌, ಜಿ.ಎಂ. ವಿಶ್ವವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗ ಮತ್ತು ಜಿ.ಎಂ. ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಡೀನ್‌ ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ಸಿದ್ಧಗಂಗಾ ರಕ್ತನಿಧಿ ಕೇಂದ್ರ ಹಾಗೂ ಹಿಮೊಫಿಲಿಯಾ ಸೊಸೈಟಿ ಮತ್ತು ರೆಡ್‌ ಕ್ರಾಸ್‌ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದು ಈ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.

Share

Recent Posts

Recent Comments

No comments to show.
Related Articles