
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಆತ್ಮಚರಿತ್ರೆಯ ಮುಖಪುಟದಲ್ಲಿರುವ ಫೋಟೋದ ಹಿಂದಿನ ಮಧುರ ನೆನಪನ್ನು ಅವರು ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆ ಹಂಚಿಕೊಂಡಿದ್ದಾರೆ. ಇಟಲಿಯಲ್ಲಿ ಯುವ ರಾಜೀವ್ ಗಾಂಧಿ ಅವರು ಕ್ಲಿಕ್ಕಿಸಿದ್ದ ಆ ಸುಂದರ ಭಾವಚಿತ್ರದ ಕಥೆಯನ್ನು ಅವರು ವಿವರಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ‘ವಟ್ ಮಾ ಲೆಫ್ಟ್ ಔಟ್ ಆಫ್ ಹರ್ ಬುಕ್’ ಎಂಬ ವೀಡಿಯೊದಲ್ಲಿ ಸೋನಿಯಾ ಗಾಂಧಿ ತಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಪುಸ್ತಕದ ಮುಖಪುಟಕ್ಕೆ ಈ ನಿರ್ದಿಷ್ಟ ಚಿತ್ರವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದಾಗ, “ನನ್ನ ತಂದೆಯ ಬಳಿ ನನ್ನ ಮದುವೆಯ ಪ್ರಸ್ತಾಪ ಮಾಡಲು ರಾಜೀವ್ ಜಿ ಇಟಲಿಯ ಟುರಿನ್ ಮತ್ತು ಓರ್ಬಾಸಾನೋಗೆ ಬಂದಿದ್ದಾಗ ಅವರು ಕ್ಲಿಕ್ಕಿಸಿದ ಫೋಟೋ ಇದು” ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
ಮದುವೆ ಪ್ರಸ್ತಾಪಕ್ಕೆ ತಂದೆಯ ನಿರಾಕರಣೆ: ರಾಜೀವ್ ಗಾಂಧಿ ಮದುವೆ ಪ್ರಸ್ತಾಪ ತೆಗೆದುಕೊಂಡು ಹೋದಾಗ ಸೋನಿಯಾ ಗಾಂಧಿ ಅವರ ತಂದೆ ಸ್ಟೆಫಾನೊ ಮೈನೋ “ನೋ, ಥ್ಯಾಂಕ್ ಯು” ಎಂದು ಮೊದಲು ನಿರಾಕರಿಸಿದ್ದರು. ಆ ಹುಡುಗನ ಕಣ್ಣುಗಳಲ್ಲಿ ಒಳ್ಳೆಯತನವಿದ್ದರೂ, ಭಾರತದ ರಾಜಕಾರಣಿಗಳು ಮತ್ತು ಅಪರಿಚಿತ ಜಗತ್ತಿಗೆ ತನ್ನ ಮಗಳನ್ನು ಕಳುಹಿಸಲು ಅವರು ಹಿಂಜರಿದರು ಎಂದು ಸೋನಿಯಾ ತಿಳಿಸಿದ್ದಾರೆ.
ಆರಂಭಿಕ ಅಧ್ಯಾಯಗಳ ಸುಲಭ ಬರವಣಿಗೆ: ರಾಜಕಾರಣದ ನಂತರದ ವರ್ಷಗಳಿಗೆ ಹೋಲಿಸಿದರೆ, ತಮ್ಮ ಇಟಲಿಯ ಬಾಲ್ಯದ ದಿನಗಳು, ರಾಜೀವ್ ಗಾಂಧಿ ಭೇಟಿ ಮತ್ತು ಮದುವೆಯ ದಿನಗಳನ್ನು ಬರೆಯುವುದು ತಮಗೆ ತುಂಬಾ ಸುಲಭವಾಗಿತ್ತು ಎಂದು ಪ್ರಿಯಾಂಕಾ ಗಾಂಧಿ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.
ಭಾರತದ ಮೇಲಿನ ಒಲವು: ಭಾರತಕ್ಕೆ ಬಂದಾಗ ಇಲ್ಲಿನ ತೀವ್ರ ಬಡತನ ಕಂಡು ಆರಂಭದಲ್ಲಿ ಆಘಾತವಾಗಿತ್ತು. ಆದರೆ ದಶಕಗಳ ರಾಜಕೀಯ ದಾಳಿಗಳ ನಡುವೆಯೂ ಭಾರತದ ಜನಸಾಮಾನ್ಯರು ತಮ್ಮನ್ನು ತಮ್ಮ ಮಗಳಂತೆ ಸ್ವೀಕರಿಸಿ ಅಪ್ಪಿಕೊಂಡಿದ್ದಾರೆ ಎಂದು ಸೋನಿಯಾ ಗಾಂಧಿ ಭಾವುಕರಾಗಿ ನುಡಿದಿದ್ದಾರೆ.




